ಕೋಟೆ ವಶಕ್ಕೆ ಕಾಂಗ್ರೆಸ್ ಬಿಜೆಪಿ ನಡುವೆ ಕಾದಾಟ..

Election
Published on
ರಾಜಕೀಯ ಮುತ್ಸದ್ದಿ ಎಸ್. ನಿಜಲಿಂಗಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ನಾಡಿಗೆ ಕೊಡುಗೆ ನೀಡಿದ ಹಾಗೂ ಅದೇ ನಿಜಲಿಂಗಪ್ಪರನ್ನು ಸೋಲಿಸಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ವಿಧಾನಸಭಾ ಚುನಾವಣೆ ಕಾವು ಜೋರಾಗಿದೆ. ಹಾಲಿ, ಮಾಜಿ, ಪರಾಜಿತ ಅಭ್ಯರ್ಥಿಗಳ ನಡುವೆ ಏಕಾಏಕಿ ಹಲವರ ತವರು ಪ್ರೇಮ ಅನಾವರಣವಾಗಿದೆ. ಆಕಾಂಕ್ಷಿಗಳ ಉಮೇದು ಹಲವು ಕ್ಷೇತ್ರಗಳಲ್ಲಿ ಕಾಣಿಸತೊಡಗಿದ್ದು, ಮತದಾರರ ಸೆಳೆಯಲು ಸುತ್ತಾಟ ಜೋರಾಗಿಯೇ ನಡೆಸಿದ್ದಾರೆ. ಮೊಳಕಾಲ್ಮೂರು, ಚಳ್ಳಕೆರೆ ಕ್ಷೇತ್ರಗಳು ಪರಿಶಿಷ್ಟ ವರ್ಗಕ್ಕೆ, ಹೊಳಲ್ಕೆರೆ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಿವೆ. ಚಿತ್ರದುರ್ಗ, ಹಿರಿಯೂರು ಹಾಗೂ ಹೊಸದುರ್ಗ ಸಾಮಾನ್ಯವರ್ಗದ ಕ್ಷೇತ್ರಗಳಾಗಿವೆ. 2018ರ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಪೈಕಿ ಚಳ್ಳಕೆರೆ ಹೊರತುಪಡಿಸಿ ಉಳಿದ ಐದರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಕಳೆದ ಚುನಾವಣಾ ಸಮಯದಲ್ಲಿ ಅನ್ಯ ಜಿಲ್ಲೆಯಿಂದ ಬಂದವರು ತವರಿಗೆ ಮರಳಲು ಸಜ್ಜಾಗಿದ್ದಾರೆಂಬ ಮಾತಿನ ನಡುವೆ, ಜಿಲ್ಲೆಗೆ ಆಗಮಿಸಬಹುದಾದ ಹೊಸಬರು ಯಾರಿಗೆಲ್ಲ ಪೆಟ್ಟು ಕೊಡಬಹುದೆಂಬ ಭವಿಷ್ಯದ ಲೆಕ್ಕಾಚಾರಗಳೂ ನಡೆದಿವೆ. ಜಿಲ್ಲೆಯಲ್ಲಿ ಸದ್ಯಕ್ಕಂತೂ ಬಿಜೆಪಿ-ಕಾಂಗ್ರೆಸ್ ಪಾರ್ಟಿಗಳ ಟಿಕೆಟ್​ಗೆ ಪೈಪೋಟಿ ಇದೆ. ಒಂದು ಕಾಲದಲ್ಲಿ ಜನತಾ ಪರಿವಾರ ಇಲ್ಲಿ ಪ್ರಭಾವಿಯಾಗಿತ್ತು. ಮತ್ತೆ ಜೆಡಿಎಸ್ ಸಂಘಟಿತವಾದರೆ ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಬಹುದು.

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ತಿಪ್ಪಾರೆಡ್ಡಿಗಿಲ್ಲ ಪ್ರತಿಸ್ಪರ್ಧಿಗಳು!

ಬಿಜೆಪಿಯ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಎದುರು ಚಿತ್ರದುರ್ಗ ಕ್ಷೇತ್ರದಲ್ಲಿ ಸದ್ಯಕ್ಕಂತೂ ಪ್ರಬಲ ಪ್ರತಿಸ್ಪರ್ಧಿಗಳು ಕಾಣಿಸುತ್ತಿಲ್ಲ. ಅವರು ಇನ್ನೂ 2-3 ಚುನಾವಣೆ ಎದುರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್​ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಹನುಮಲಿ ಷಣ್ಣುಖಪ್ಪ ಮತ್ತೆ ಕಣಕ್ಕಿಳಿಯಬಹುದು. ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಯಾವ ಪಕ್ಷದ ಅಭ್ಯರ್ಥಿ ಎಂಬ ಕುತೂಹಲವಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಜೆಡಿಎಸ್​ನ ವೀರೇಂದ್ರ ಪಪ್ಪಿ ಮತ್ತೆ ಅಖಾಡಕ್ಕಿಳಿಯಲಿದ್ದಾರೆ. ಮಾಜಿ ಎಂಎಲ್​ಸಿ ರಘು ಆಚಾರ್ ಕೂಡ ದುರ್ಗದ ಮೇಲೆ ಕಣ್ಣಿಟ್ಟಿದ್ದಾರಂತೆ!

ಗೂಳಿಹಟ್ಟಿಗೆ ಸ್ವಪಕ್ಷದವರದ್ದೇ ಫೈಟ್

ಹೊಸದುರ್ಗ ಕ್ಷೇತ್ರದಲ್ಲಿ ಮತ್ತೆ ಕಣಕ್ಕಿಳಿಯಬೇಕೆಂಬುದು ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಇಚ್ಛೆ. ಆದರೆೆ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ವಿಧಾನ ಪರಿಷತ್​ನ ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಪರ್ಧಾಕಾಂಕ್ಷಿಯಾಗಿದ್ದ ಲಿಂಗಮೂರ್ತಿ ಈಗ ವಿಧಾನಸಭೆ ಎಲೆಕ್ಷನ್​ಗೆ ಸಜ್ಜಾಗುತ್ತಿದ್ದಾರೆ. ಹೊಸದುರ್ಗದಲ್ಲಿ ಲಿಂಗಮೂರ್ತಿ ಸ್ಥಾಪಿಸಿರುವ ಜನಸಂಪರ್ಕ ಕಚೇರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿರುವುದು ವಿಶೇಷ. ಒಂದು ವೇಳೆ ಬಿಜೆಪಿ ಟಿಕೆಟ್ ಕೈ ತಪ್ಪಿದರೆ ಗೂಳಿಹಟ್ಟಿ ಶೇಖರ್ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಕಣಕ್ಕೆ ಇಳಿಯಲಿದ್ದಾರೆ. ವಿವಿಧ ಪಕ್ಷಗಳ ಹಲವು ಆಕಾಂಕ್ಷಿಗಳು ಅಖಾಡ ಸಿದ್ಧಮಾಡಿಕೊಳ್ಳುತ್ತಿದ್ದಾರೆ.
ತಿರುವು ನೀಡುವುದೇ ಸಿದ್ದರಾಮೋತ್ಸವ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದು, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಹಾಗೂ ಅಕ್ಟೋಬರ್​ನಲ್ಲಿ ಒಂದು ವಾರ ಜಿಲ್ಲೆಯಲ್ಲಿ ಹಾದು ಹೋಗಲಿರುವ ಭಾರತ್ ಜೋಡೊ ಪಾದಯಾತ್ರೆ, ರಾಹುಲ್ ಇಷ್ಟಲಿಂಗ ದೀಕ್ಷೆ ಪಡೆದಿ ರುವುದು ಪಕ್ಷದ ಬಲವರ್ಧನೆಗೆ ಪೂರಕವಾಗಲಿವೆ ಎಂಬ ಆಶಯ ಕಾಂಗ್ರೆಸ್ ವಲಯದಲ್ಲಿ ಗರಿಗೆದರಿದೆ. ಕೇಂದ್ರ ಮಂತ್ರಿ, ಮೂವರು ಎಂಎಲ್​ಸಿ ಹಾಗೂ ಐವರು ಶಾಸಕರನ್ನು ಹೊಂದಿರುವ ಬಿಜೆಪಿ, ಸಂಘಟನೆಯೊಂದಿಗೆ ಜಯಭೇರಿ ಬಾರಿಸಲು ಸಿದ್ಧತೆ ನಡೆಸಿದೆ.

ಪೂರ್ಣಿಮಾ ಸುಧಾಕರ್

ಹಿರಿಯೂರು ಚುನಾವಣಾ ಕಣದಲ್ಲಿ ಬಿಜೆಪಿ ಶಾಸಕಿ ಪೂರ್ಣಿಮಾ ಅವರನ್ನು ಮಾಜಿ ಸಚಿವ ಕಾಂಗ್ರೆಸ್ ಡಿ.ಸುಧಾಕರ್ ಮತ್ತೆ ಎದುರಿಸಲಿದ್ದಾರೆ. ಆದರೆ, ಕ್ಷೇತ್ರದಲ್ಲಿ ಕೈ ಟಿಕೆಟ್ ಮೇಲೆ ಇನ್ನೂ ಕೆಲವರು ಕಣ್ಣಿಟ್ಟು, ಓಡಾಡುತ್ತಿರುವುದು ಸುಧಾಕರ್​ಗೆ ಇರಿಸುಮುರಿಸು ತರಿಸಿದೆ. ಜೆಡಿಎಸ್​ನಿಂದ ಸ್ಪರ್ಧಿಸುತ್ತಾರೆಂದು ಹೇಳಲಾಗುತ್ತಿದ್ದ ವೀರೇಂದ್ರ ಪಪ್ಪಿ ಮತ್ತೆ ಚಿತ್ರದುರ್ಗದೆಡೆ ಮುಖ ಮಾಡಿದ್ದಾರೆನ್ನಲಾಗಿದೆ.

ಆಂಜನೇಯಗೆ ಚಂದ್ರಪ್ಪ ಎದುರಾಳಿ

ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಮಾಜಿ ಸಚಿವ ಆಂಜನೇಯ ಹಾಗೂ ಬಿಜೆಪಿ ಶಾಸಕ ಎಂ.ಚಂದ್ರಪ್ಪ ನಡುವೆ ಮತ್ತೆ ಹಣಾಹಣಿ ಏರ್ಪಡಲಿದೆ. ಆದರೆ, ಜಿಪಂ ಮಾಜಿ ಸದಸ್ಯೆ ಸವಿತಾರಘು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವಿಧಾನಸಭೆ ಪ್ರವೇಶಿಸಲು ಆಸಕ್ತಿ ತೋರಿಸಿರುವ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ನಾನು ಯಾವುದೇ ಕಾರಣಕ್ಕೂ ಹೊಳಲ್ಕೆರೆಯಿಂದ ಮಾತ್ರ ಸ್ಪರ್ಧಿಸು ವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀರಂಗಯ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಸೈನ್ಸ್ ಸಿಟಿಯಲ್ಲಿ ಹ್ಯಾಟ್ರಿಕ್ ತವಕ

ಎಣ್ಣೆ ನಗರಿ, ಸೈನ್ಸ್​ಸಿಟಿ ಖ್ಯಾತಿಯ ಚಳ್ಳಕೆರೆಯಲ್ಲಿ ಹ್ಯಾಟ್ರಿಕ್ ಸಾಧನೆ ತವಕದಲ್ಲಿ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ಇದ್ದಾರೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ ಈಗ ಪಕ್ಷದಲ್ಲಿ ಇಲ್ಲ. ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ರವೀಶ್​ಕುಮಾರ್ ಮತ್ತೆ ಕಣಕ್ಕೆ ಇಳಿಯಬಹುದು. ಬಿಜೆಪಿ ಮತ್ತೆ ಅವಕಾಶ ನೀಡಿದರೆ ಕುಮಾರಸ್ವಾಮಿ, ಈ ಹಿಂದೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿ.ಪಿ.ಜಯಪಾಲಯ್ಯ ಹಾಗೂ ಇನ್ನೂ ಕೆಲವರ ಹೆಸರು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ. ಅಧಿಕಾರಿಗಳೂ ಕಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮೊಳಕಾಲ್ಮೂರು ತೊರೆಯುವರೇ ಶ್ರೀರಾಮುಲು?

ಸಚಿವ ಬಿ.ಶ್ರೀರಾಮುಲು ಮತ್ತೆ ಮೊಳಕಾಲ್ಮೂರಿನಿಂದಲೇ ಕಣಕ್ಕೆ ಇಳಿಯಬಹುದು. ಒಂದು ವೇಳೆ ಅವರು ಮೊಳಕಾಲ್ಮೂರು ತೊರೆದರೆ ಅವರ ಆಪ್ತರಿಗೆ ಟಿಕೆಟ್ ಕೊಡಿಸಬಹುದೆಂಬ ಮಾತಿದೆ. ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಎಲ್ಲಿಂದ ಸ್ಪರ್ಧಿಸುತ್ತಾರೆಂಬ ಕುತೂಹಲವಿದೆ. ಅವರ ನಿರ್ಧಾರ ಇತರ ಪಕ್ಷದ ಪ್ರಮುಖರ ಪಕ್ಷಾಂತರಕ್ಕೆ ಕಾರಣವಾಗಲಿದೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ರಾಮುಲು ಬಳ್ಳಾರಿಗೆ ಹಿಂತಿರುಗಿದರೆ ಮೊಳಕಾಲ್ಮೂರಿಂದ ಸ್ಪರ್ಧೆಗೆ ಅವಕಾಶ ಸಿಗಬಹುದೆಂಬ ಎಣಿಕೆಯಲ್ಲಿ ಜಯಪಾಲಯ್ಯ ಕೂಡ ಇದ್ದಾರೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಡಾ.ಬಿ.ಯೋಗೇಶ್​ಬಾಬು ಹಾಗೂ ಮಾಜಿ ಶಾಸಕ ತಿಪ್ಪೇಸ್ವಾಮಿ ಕೈ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಎನ್.ವೈ.ಹನುಮಂತಪ್ಪ ಕುಟುಂಬ ಸದಸ್ಯರ ಹೆಸರೂ ಕೇಳಿ ಬರುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net