

ಬೆಂಗಳೂರು: ಬಾಲಿವುಡ್ ನಟ ಸೋನು ಸೂದ್ ಅವರ ಸಹಾಯಹಸ್ತ ಸ್ಯಾಂಡಲ್ವುಡ್ಗೂ ವ್ಯಾಪಿಸಿದೆ. ಅರ್ಥಾತ್, ಸ್ಯಾಂಡಲ್ವುಡ್ ನಟಿ ಮಾನ್ವಿತಾ ಕಾಮತ್ ಅವರ ತಾಯಿಯ ಚಿಕಿತ್ಸೆಗೂ ಅವರು ನೆರವಾಗಿದ್ದಾರೆ. ಅವರು ಮಾಡಿದ್ದ ಸಹಾಯವನ್ನು ಸ್ಮರಿಸಿಕೊಂಡ ನಟಿ ಮಾನ್ವಿತಾ ಅವರೊಂದಿಗೆ ಮಾತನಾಡಿ ಧನ್ಯವಾದ ತಿಳಿಸಿದ್ದಲ್ಲದೆ, ಆ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕವೂ ಹಂಚಿಕೊಂಡಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿದ್ದ ಕಾಲದಲ್ಲಿ ಹಲವಾರು ಮಂದಿಗೆ ನಾನಾ ರೀತಿಯಲ್ಲಿ ಸಹಾಯ ಮಾಡಿದ್ದ ನಟ ಸೋನು ಸೂದ್ ಹಲವರ ಪಾಲಿಗೆ ರಿಯಲ್ ಲೈಫ್ ಹೀರೋ ಆಗಿ ಕಾಣಿಸಿದ್ದರು. ಅವರು ನಿಜ ಜೀವನದಲ್ಲಿ ಮಾಡಿದ್ದ ಸಹಾಯದಿಂದಾಗಿಯೇ ಅವರಿಗೆ ಹಿಂದೆಂದೂ ಸಿಗದಷ್ಟು ಪ್ರಚಾರ ಹಾಗೂ ಜನಪ್ರಿಯತೆ ಲಭಿಸಿತ್ತು. ಅದೇ ಸೋನು ಸೂದ್ ಈಗ ನಟಿ ಮಾನ್ವಿತಾಗೂ ಸಹಾಯ ಮಾಡಿದ್ದಾರೆ.
ತಾಯಿಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಉಂಟಾದ ಅಸ್ವಸ್ಥತೆ ಕುರಿತು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ ಕರಾವಳಿ ಬೆಡಗಿ ಮಾನ್ವಿತಾಗೆ ಸೋನು ಸೂದ್ ಫೌಂಡೇಷನ್ನ ಮಂಗಳೂರಿನ ಪ್ರತಿನಿಧಿ ಅಭಿಷೇಕ್ ರಾವ್ ಸ್ಪಂದಿಸಿದ್ದರು. ಮಾತ್ರವಲ್ಲ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಗಾದ ನೆರವನ್ನು ಸ್ಮರಿಸಿ ಮಾನ್ವಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಉಳಿವಿಗಾಗಿ ಜನರು ಮನುಷ್ಯತ್ವವನ್ನೇ ಮಾರುವಂಥ ಈ ಕಾಲದಲ್ಲಿ ಡಾ.ಗುಕುಲ್ನಾಥ್ ಅವರಂಥವರು ಸಿಕ್ಕಿದ್ದು ಸಂತೋಷದ ಸಂಗತಿ ಎಂದು ಆ. 20ರಂದು ಟ್ವೀಟ್ ಮಾಡಿರುವ ಮಾನ್ವಿತಾ, ಸೋನು ಸೂದ್ ಮತ್ತು ಅಭಿಷೇಕ್ ರಾವ್ ಅವರನ್ನೂ ಮೆನ್ಷನ್ ಮಾಡಿ, ಅಪೊಲೋ ಆಸ್ಪತ್ರೆಯಲ್ಲಿ ಅಗತ್ಯವಿದ್ದ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದರು.
ಇಂದು ಮತ್ತೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಾನ್ವಿತಾ, ಈಗಷ್ಟೇ ಸೋನು ಸೂದ್ ಅವರ ಜತೆ ಮಾತನಾಡಿದೆ ಧನ್ಯವಾದಗಳನ್ನು ತಿಳಿಸಿದೆ. ಅವರು ನನ್ನ ತಾಯಿಗಾಗಿ ಮಾಡಿದ್ದ ಎಲ್ಲ ನೆರವಿಗಾಗಿ ಥ್ಯಾಂಕ್ಸ್ ಹೇಳಿದೆ. ನೀವು ನಿಜವಾದ ಹೀರೋ, ಎಲ್ಲ ಸಹಾಯಕ್ಕೆ ತುಂಬಾ ಥ್ಯಾಂಕ್ಸ್ ಎಂದು ಹೇಳಿಕೊಂಡಿದ್ದಾರೆ.
ಹಾಗೆಯೇ ಇವೆಲ್ಲಕ್ಕೂ ಕೊಂಡಿಯಂತಿದ್ದ ಅಭಿಷೇಕ್ ರಾವ್ ಅವರ ಸಹಾಯವನ್ನೂ ಸ್ಮರಿಸಿದ ಮಾನ್ವಿತಾ, ಸಂಕಷ್ಟದ ಕಾಲದಲ್ಲಿ ಸಹಾಯ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಸೋನು ಸೂದ್ ಅವರು ನಮ್ಮ ಬದುಕಿನ ಕಷ್ಟದ ಸಂದರ್ಭದಲ್ಲಿ ದೇವತೆ ಥರ ಸಹಾಯಕ್ಕೆ ಬಂದರು, ನಿಮ್ಮ ಸಹಾಯದಿಂದ ತಾಯಿ ಈಗ ತುಂಬಾ ಗುಣವಾಗಿದ್ದಾರೆ ಎಂಬುದಾಗಿ ಮಾನ್ವಿತಾ ಹೇಳಿದ್ದಾರೆ.