ಶೀಘ್ರ ಬಜೆಟ್ ಪೂರ್ವಭಾವಿ ಸಭೆ

ಶೀಘ್ರ ಬಜೆಟ್ ಪೂರ್ವಭಾವಿ ಸಭೆ
Published on

ಅರಸೀಕೆರೆ: ನಗರ ನಿವಾಸಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅಧ್ಯಕ್ಷ ಎಂ.ಸಮೀವುಲ್ಲಾ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆಯನ್ನು ಶೀಘ್ರದಲ್ಲಿ ಕರೆಯಲಾಗುವುದು ಎಂದು ಪೌರಾಯುಕ್ತ ಎಚ್.ಟಿ.ಕೃಷ್ಣ ಮೂರ್ತಿ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, 31ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಹೊಣೆಗಾರಿಕೆ ನಗರಸಭೆ ಆಡಳಿತದ ಮೇಲಿದೆ. ಆದ್ದರಿಂದ ಮಹತ್ವದ ಸಭೆ ನಡೆಯುತ್ತಿದ್ದು ಸಲಹೆ, ಸೂಚನೆ ನೀಡುವ ಜತೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ನಗರೋತ್ಥಾನ ಯೋಜನೆಯಡಿ ರಸ್ತೆ, ಚರಂಡಿ ಸೇರಿದಂತೆ ಹಲವು ಬಗೆಯ ಕಾಮಗಾರಿಗಳು ಪ್ರಗತಿಯಲ್ಲಿವೆ. ನಗರದ ಹೊರವಲಯದ ಸ್ಮಶಾನಗಳ ಸಮಸ್ಯೆ ಪರಿಹರಿಸಲು ಅಗತ್ಯ ಅನುದಾನ ಮೀಸಲಿರಿಸಿದ್ದು ಅಂತ್ಯಕ್ರಿಯೆಯಲ್ಲಿ ಸೇರುವ ಜನರಿಗೆ ತೊಂದರೆಯಾಗದಂತೆ ಬೆಳಕು, ನೀರಿನ ಸೌಲಭ್ಯ ಒದಗಿಸಲು ಸೂಚನೆ ನೀಡಲಾಗಿದ್ದು, ಸಮಸ್ಯೆ ಕಂಡುಬಂದಲ್ಲಿ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.

ಸಕಾಲಕ್ಕೆ ಕಸ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆ ಕಾಪಾಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಸಮಗ್ರ ಪುರೋಭಿವೃದ್ಧಿಗೆ ನಾಗರಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು. ವಿವಿಧ ಸಂಘಟನೆಗಳ ಮುಖಂಡರು, ನಾಗರಿಕರು ಪಾಲ್ಗೊಂಡು ಸಮಸ್ಯೆ ತೆರದಿಡುವ ಜತೆಗೆ ಪರಿಹಾರಕ್ಕೂ ಮನವಿ ಮಾಡಿದರು. ಉಪಾಧ್ಯಕ್ಷ ಮನೋಹರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net