

ಮಳವಳ್ಳಿ: ಪಟ್ಟಣದಲ್ಲಿ ಡಿಸೆಂಬರ್‌ನಲ್ಲಿ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವ ಆಚರಣೆ ಸಂಬಂಧ ಜೂ.24 ರಂದು ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ ಪೂರ್ವ ನಿಯೋಜಿತ ಸಭೆ ಕರೆಯಲಾಗಿದ್ದು, ಅಂದಿನ ಸಭೆಗೆ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಮುಖಂಡರನ್ನು ಆಹ್ವಾನಿಸಲು ಸಕಲ ಸಿದ್ಧ್ದತೆ ಮಾಡಿಕೊಳ್ಳುವಂತೆ ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಮಠಾಧೀಶರು ಹಾಗೂ ವೀರಶೈವ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸುತ್ತೂರು ಜಯಂತಿ ಆಚರಣೆಗೆ ಇತಿಹಾಸವಿದೆ. ತಾಲೂಕಿನ ಸಮುದಾಯದ ಶರಣರು ಜವಾಬ್ದಾರಿ ನಿರ್ವಣೆಯ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ನಮ್ಮ ಧಾರ್ಮಿಕ ಪರಂಪರೆಯ ಮೆರುಗನ್ನು ಹೆಚ್ಚಿಸುವಂತೆ ಕರೆ ನೀಡಿದರು.
ಇಂದಿನ ಸಭೆಯಲ್ಲಿ ಜಯಂತಿ ಆಚರಣೆಗೆ ಎಲ್ಲರೂ ಸಹಮತ ವ್ಯಕ್ತಪಡಿಸಿರುವುದರಿಂದ ಪಟ್ಟಣದ ರೈತ ಸಮುದಾಯ ಭವನದ ಮುಂಭಾಗದ ಖಾಲಿ ನಿವೇಶನದಲ್ಲಿ ಜೂ.24ರಂದು ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ ಮತ್ತೊಮ್ಮೆ ಸಭೆ ಆಯೋಜಿಸಲು ಸಲಹೆ ನೀಡಿದರು. ಸರ್ವ ಸಮುದಾಯಗಳು, ಎಲ್ಲ್ಲ ರಾಜಕೀಯ ಪಕ್ಷಗಳ ಮುಖಂಡರು, ಜಿಲ್ಲೆಯ ಹರಗುರು ಚರಮೂರ್ತಿಗಳು ಮತ್ತು ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಬೇಕು. ಪೂರ್ವಭಾವಿ ಸಭೆಯನ್ನು ವ್ಯವಸ್ಥಿತವಾಗಿ ರೂಪಿಸುವುದು ಹಾಗೂ ಅಗಮಿಸಿದ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಬೇಕು ಎಂದು ತಿಳಿಸಿದರು.
ಶ್ರೀಗಳ ಸಲಹೆಯಂತೆ ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಪೂರ್ವಭಾವಿ ಸಭೆಗೆ ಜನರನ್ನು ಅಹ್ವಾನಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಂಡರು. ಸಭೆಯಲ್ಲಿ ತಾಲೂಕಿನ ವಿವಿಧ ಮಠಗಳ ಮಠಾಧೀಶರಾದ ಶ್ರೀ ನಂಜುಂಡ ಸ್ವಾಮೀಜಿ, ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಹಂಗ್ರಾಪುರ, ದ್ಯಾವಪಟ್ಟಣ, ಹೆಬ್ಬಣಿ, ಪೂರಿಗಾಲಿ, ಮುಡುಕುತೊರೆ ಮಠದ ಶ್ರೀಗಳು ಹಾಗೂ ಸಮುದಾಯಗಳ ಮುಖಂಡರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.