

ಸಿದ್ದಾಪುರ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಪಾಲಿಬೆಟ್ಟದ ಗಣಪತಿ ದೇವಸ್ಥಾನ, ಲೂಡ್ಸ್ ಮಾತ ಚರ್ಚ್ ಹಾಗೂ ಆರ್ಕಾಡ್ ಬಾಬಾ ದರ್ಗಾದಲ್ಲಿ ಭಾನುವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನೆರವೇರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ಕಾಶ್ಮೀರ ಪ್ರವಾಸಕ್ಕೆ ತೆರಳಿದ ಪ್ರವಾಸಿಗರ ಮೇಲೆ ದಾಳಿ ನಡೆಸಿ ಅಮಾಯಕರನ್ನು ಬಲಿ ತೆಗೆದುಕೊಂಡ ಉಗ್ರರನ್ನು ಮಟ್ಟಹಾಕುವಲ್ಲಿ ಭಾರತದ ಸೇನೆ ಯಶಸ್ವಿಯಾಗಿದ್ದು, ಸೇನಾ ಯೋಧರಿಗೆ ಮತ್ತಷ್ಟು ಬಲಸ್ಥೈರ್ಯ ತುಂಬಲು ಪಾಲಿಬೆಟ್ಟದ ದೇವಸ್ಥಾನ ಚರ್ಚ್ ಹಾಗೂ ದರ್ಗಾದಲ್ಲಿ ಒಗ್ಗಟ್ಟಿನ ಮೂಲಕ ಪೂಜೆ ಪ್ರಾರ್ಥನೆ ನೆರೆವೇರಿಸಲಾಗಿದೆ. ಭಾರತ ದೇಶದ ಜನರು ಒಗ್ಗಟ್ಟಿನ ಮೂಲಕ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಭಾರತೀಯ ಸೈನ್ಯಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ. ಉಗ್ರರನ್ನ ಸಂಪೂರ್ಣವಾಗಿ ಮಟ್ಟ ಹಾಕಲು ಭಾರತದ ಸೈನಿಕರಿಗೆ ಬೆಂಬಲವಾಗಿ ಪ್ರತಿಯೊಬ್ಬರೂ ನಿಲ್ಲಬೇಕೆಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ದೂಜಾ ವೇಗಸ್, ಉಪಾಧ್ಯಕ್ಷ ರಾಜಪ್ಪ, ಚರ್ಚ್ ಧರ್ಮಗುರು ಮರಿಯ ಜಾರ್ಜ್, ತಮಿಳು ಸಂಘದ ಜಿಲ್ಲಾಧ್ಯಕ್ಷ ಮೈಕಲ್, ತಾಲೂಕು ಭಾಜಪ ಸಮಿತಿ ಸದಸ್ಯ ಪ್ರಶಾದ್ ಕುಮಾರ್, ಆಟೋ ಚಾಲಕ ಸಂಘದ ಕ್ರೀಡಾ ಸಮಿತಿಯ ಅಧ್ಯಕ್ಷ ಪವನ್ ಕುಮಾರ್, ಸಿಯಾದ್, ವಿನ್ಸೆಂಟ್ ಇತರರಿದ್ದರು.