

ತುಮಕೂರು
ಇನ್ನೂ 3 ದಿನದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಪತ್ತೆಹಚ್ಚಿ ಎನ್‌ಕೌಂಟರ್ ಮಾಡದಿದ್ದರೆ ತುಮಕೂರಿನಿಂದ ಮುಖ್ಯಮಂತ್ರಿಗಳ ಮನೆವರೆಗೆ ಪಾದಯಾತ್ರೆ ಮಾಡುವುದಾಗಿ ಋಷಿಕುಮಾರ ಸ್ವಾಮೀಜಿ ಗಡುವು ನೀಡಿದ್ದಾರೆ.
ನಗರದ ಟೌನ್‌ಹಾಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ವಿರೋಧಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಋಷಿಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರವೀಣ್ ಹತ್ಯೆಗೈದಿರುವ ಆರೋಪಿಗಳ ಭಾವಚಿತ್ರಗಳನ್ನು ಸುಡುವ ಮೂಲಕ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲೂ ಹಿಂದು ಕಾರ್ಯಕರ್ತರಿದ್ದಾರೆ. ಆದರೂ, ಬಿಜೆಪಿಯಲ್ಲಿರುವ ಹಿಂದುಗಳನ್ನೇ ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ನಿಮಗೆ ಧಮ್ ಇದ್ದರೆ ನನ್ನನ್ನು ಹೊಡೆಯಿರಿ. ನನಗೆ ಯಾವುದೇ ಭದ್ರತೆ ಇಲ್ಲ. ನನ್ನ ಮೇಲೆ ಬಹಳಷ್ಟು ದ್ವೇಷ ಸಾಧಿಸುತ್ತಿದ್ದಾರೆ ಎಂದು ಗುಪ್ತ ದಳದ ಮಾಹಿತಿ ಇದೆ ಎಂದರು.
ರಾಜ್ಯದಲ್ಲಿ ಹಿಂದುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಅದರಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಹಿಂದುಗಳ ಹತ್ಯೆ ನಡೆಯುತ್ತಿದೆ. ಪ್ರವೀಣ್ ಅವರದ್ದು 35ನೇ ಹತ್ಯೆಯಾಗಿದೆ. ಯುಪಿಯಲ್ಲಿನ ಯೋಗಿ ಆದಿತ್ಯನಾಥ ಸರ್ಕಾರದ ಕಾರ್ಯವೈಖರಿಯನ್ನು ನೆನಪಿಸಿಕೊಳ್ಳಿ. ಆರಕ್ಷಕರಿಗೆ ಸ್ವಾತಂತ್ರ್ಯ ನೀಡಿ. ಈ ಕೆಲಸವನ್ನು ಮಾಡದಿದ್ದರೆ ಹಂತಕರಿಗೆ ಎಡೆಮುರಿ ಕಟ್ಟುವುದು ಕಷ್ಟದ ಕೆಲಸ. ಎಸ್‌ಡಿಪಿಐ, ಪಿಎಫ್‌ಐ ಅನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು. ಇಲ್ಲವಾದರೆ ಇದೇ ರೀತಿಯ ಹೀನ ಕೃತ್ಯಗಳು ರಾಜ್ಯದಲ್ಲಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.
ಬಜರಂಗ ದಳದ ಮಂಜು ಭಾರ್ಗವ, ವಿಶ್ವ ಹಿಂದು ಪರಿಷತ್‌ನ ಜಿ.ಕೆ.ಶ್ರೀನಿವಾಸ್ ಹಾಗೂ ಹಿಂದುಪರ ಸಂಘಟನೆಗಳ ಪದಾಧಿಕಾರಿಗಳಿದ್ದರು.