

ಮೂಲ್ಕಿ: ಬಪ್ಪನಾಡು ಬಳಿಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ಭಾನುವಾರ ಪ್ರತಿಷ್ಠಾ ಪಂಚಮಿ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಅರ್ಚಕ ಸುದರ್ಶನ್ ಭಟ್ ಹಾಗೂ ಲಕ್ಷ್ಮೀ ಕಾಂತ್ ಭಟ್ ಪೌರೋಹಿತ್ಯದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಸದ್ಗುರು ಶ್ರೀ ಸಾಯಿಬಾಬರಿಗೆ ಅಭಿಷೇಕ ಪೂಜೆ ನಡೆಯಿತು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಭಜನಾ ಜ್ಯೋತಿ ಬೆಳಗಿಸಿದರು. ಬಳಿಕ ಭಕ್ತರಿಂದ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಯುವಕ ವೃಂದದ ವತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಹಾಅನ್ನಸಂತರ್ಪಣೆ ನಡೆಯಿತು.
ಕ್ಷೇತ್ರದ ವತಿಯಿಂದ ದುಗ್ಗಣ್ಣ ಸಾವಂತ ಅವರನ್ನು ಗೌರವಿಸಲಾಯಿತು. ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಉದ್ಯಮಿ ಚೇತನ್ ಶೆಟ್ಟಿ, ಮಂದಿರದ ಅಧ್ಯಕ್ಷ ದಿನೇಶ್ ಹೆಗ್ಡೆ ಮಾನಪಾಡಿ, ಸೇವಾ ಕರ್ತೃ ವಿದ್ಯಾ ರತ್ನಾಕರ ಶೆಟ್ಟಿ, ಟ್ರಸ್ಟಿ ಮಹೀಮ್ ಹೆಗ್ಡೆ, ವಿಶ್ವನಾಥ ಬಪ್ಪನಾಡು, ಆಶಾಲತಾ, ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು.