ಮಕ್ಕಳಿಗೆ ಆಚಾರ ವಿಚಾರಗಳ ಬಗ್ಗೆ ತಿಳಿಹೇಳಿ : ಮಮತಾ ಪಿ.ಶೆಟ್ಟಿ ಸಲಹೆ

New Project (15)
Published on

ಸುಳ್ಯ: ಮಕ್ಕಳಿಗೆ ಸಮುದಾಯದ ಆಚಾರ ವಿಚಾರಗಳನ್ನು ಹಿರಿಯರು ತಿಳಿಸಿಕೊಟ್ಟರೆ ಮಕ್ಕಳು ಸುಸಂಸ್ಕೃತರಾಗುತ್ತಾರಲ್ಲದೆ ಅನಾದಿ ಕಾಲದ ಸಂಸ್ಕೃತಿಯೂ ಉಳಿಯುವಂತಾಗುತ್ತದೆ ಎಂದು ಉದ್ಯಮಿ ಡಾ.ಮಮತಾ ಪಿ.ಶೆಟ್ಟಿ ಹೇಳಿದರು.

ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದೊಂದಿಗೆ ಸುಳ್ಯ ಕೇಪಳದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ರಾಷ್ಟ್ರಶಿಕ್ಷಕ ಪ್ರಶಸ್ತಿ ಪರಸ್ಕೃತ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ವಿ.ಶೆಟ್ಟಿ ಸಮಾರಂಭ ಉದ್ಘಾಟಿಸಿದರು. ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ಮತ್ತು ಪ್ರಶಸ್ತಿ ಸಮಿತಿ ಚೇರ್‌ಮ್ಯಾನ್ ಉಮೇಶ್ ಶೆಟ್ಟಿ ಬೆಂಗಳೂರು ಸಂಘದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬೆಂಗಳೂರು ಬಂಟರ ಸಂಘದ ನಿರ್ದೇಶಕಿ ಶೋಭಾ ಶೇಖ, ಬಂಟರ ಮಹಿಳಾ ಘಟಕದ ಉಪಾಧ್ಯಕ್ಷೆ ಸನ್ನುತ ರೈ, ಪ್ರಧಾನ ಕಾರ್ಯದರ್ಶಿ ಉಷಾ ಬಿ.ರೈ, ಜಾಲ್ಸೂರು ವಲಯ ಬಂಟರ ಸಂಘದ ಅಧ್ಯಕ್ಷ ಶಿವರಾಮ ರೈ, ಸುಳ್ಯ ವಲಯ ಬಂಟರ ಸಂಘದ ಅಧ್ಯಕ್ಷ ದಯಾಕರ ರೈ, ಅರಂತೋಡು ವಲಯ ಬಂಟರ ಸಂಘದ ಅಧ್ಯಕ್ಷ ಜೆ.ಕೆ.ರೈ, ಬೆಳ್ಳಾರೆ ವಲಯ ಬಂಟರ ಸಂಘದ ಅಧ್ಯಕ್ಷ ಕರುಣಾಕರ ಆಳ್ವ ಇದ್ದರು.

ಸುಳ್ಯ ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ಸ್ವಾಗತಿಸಿದರು, ಕೋಶಾಧಿಕಾರಿ ಗಂಗಾಧರ ರೈ ಸೋಣಂಗೇರಿ ವಂದಿಸಿದರು. ಗೀತಾ ಶೆಟ್ಟಿ ಹಾಗೂ ವಸಂತಿ ರೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net