ರಸ್ತೆ ಅಪಘಾತ ತಪ್ಪಿಸಲು ಜಂಟಿ ತಪಾಸಣೆ : ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ತೀರ್ಮಾನ : ಹೆಚ್ಚುತ್ತಿರುವ ಆಕ್ಸಿಡೆಂಟ್ ಬಗ್ಗೆ ಕಳವಳ

Published on

ಕಾಸರಗೋಡು: ರಸ್ತೆ ಅಪಘಾತ ತಪ್ಪಿಸಲು ಮತ್ತು ಸುಗಮ ಸಂಚಾರ ಖಚಿತಪಡಿಸಿಕೊಳ್ಳಲು ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ, ಆರ್‌ಟಿಒ ನೇತೃತ್ವದಲ್ಲಿ ಜಂಟಿ ತಪಾಸಣೆ ನಡೆಸಲು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕ ಇ.ಚಂದ್ರಶೇಖರನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಅಪಘಾತ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಕ್ರಮಗಳ ಕುರಿತು ವಿವರಿಸಿದರು.

ವೆಳ್ಳರಿಕುಂಡ್ ತಾಲೂಕು ಆಸ್ಪತ್ರೆಯಲ್ಲಿ ಜನವರಿ ಎರಡನೇ ವಾರದಿಂದ ಡಯಾಲಿಸಿಸ್ ಕೇಂದ್ರ ಆರಂಭವಾಗಲಿದೆ. ಜತೆಗೆ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಯೋಜನೆ ಪ್ರಾರಂಭಿಸಲು ಸಾಧ್ಯವಾಗಲಿದೆ. ಸಾಕಷ್ಟು ನೌಕರರಿಲ್ಲದ ಕಾರಣ ಹುದ್ದೆ ಸೃಷ್ಟಿಸಲು ಆರೋಗ್ಯ ಇಲಾಖೆ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಡಿಎಂ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರಾಜಗೋಪಾಲನ್, ಇ.ಚಂದ್ರಶೇಖರನ್, ವಕೀಲ ಸಿ.ಎಚ್.ಕುಞಂಬು, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಬೇಬಿ ಬಾಲಕೃಷ್ಣನ್, ನೀಲೇಶ್ವರಂ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಕಾಞಂಗಾಡ್ ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್ ಸ್ವಾಗತಿಸಿದರು.

ಟಾಟಾ ಆಸ್ಪತ್ರೆ ಕಾಮಗಾರಿ ಪರಿಶೀಲನೆ

ಕುಟ್ಟಿಕೋಲ್ 110 ಕೆವಿ ಸಬ್‌ಸ್ಟೇಷನ್ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಕುಟ್ಟಿಕೋಲ್ 110 ಕೆವಿ ಸಬ್‌ಸ್ಟೇಷನ್ ಕಾಮಗಾರಿ ಪ್ರಗತಿ ಬಗ್ಗೆ ಕೆಎಸ್‌ಇಬಿ ಉಪ ಮುಖ್ಯ ಇಂಜಿನಿಯರ್ ಶಾಸಕ ಸಿ.ಎಚ್.ಕುಞಂಬು ಅವರಿಗೆ ಮಾಹಿತಿ ನೀಡಿದರು. ಟಾಟಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಶಾಸಕರು ಪರಿಶೀಲಿಸಿದರು. ಕಂಟೇನರ್‌ಗಳನ್ನು ಅಗತ್ಯವಿರುವ ಇಲಾಖೆಗಳಿಗೆ ನೀಡಿ ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಕೆಳಸೇತುವೆಗಳ ಅಗಲ ಹಾಗೂ ವಾಹನಗಳು ಸಂಚರಿಸುವ ರೀತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net