ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ: ಪ್ರತಾಪಚಂದ್ರ ಶೆಟ್ಟಿ ಇಂಗಿತ

Prathapchandra Shetty
Published on

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಸಭಾಪತಿ ಸ್ಥಾನ ಪಡೆಯುವುದಕ್ಕಾಗಿ ಮಂಗಳವಾರ ಮೂರೂ ಪ್ರಮುಖ ಪಕ್ಷಗಳ ಸದಸ್ಯರು ನಡೆಸಿದ ‘ಸಮರ’ದಿಂದ ಬೇಸತ್ತಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸದ್ಯದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಸಭಾಪತಿಗೆ ಬಹುಮತದ ಬೆಂಬಲವಿಲ್ಲವೆಂದು ಜೆಡಿಎಸ್ ಸದಸ್ಯರು ಈಗಾಗಲೇ ಪರಿಷತ್ ಕಾರ್ಯದರ್ಶಿಗೆ ಅಧಿಕೃತವಾಗಿ ಪತ್ರ ಸಲ್ಲಿಸಿದ್ದಾರೆ. ತಮಗೆ ಬಹುಮತವಿಲ್ಲದೆ ಇರುವುದು ಸ್ವತಃ ಪ್ರತಾಪಚಂದ್ರ ಶೆಟ್ಟಿಯವರಿಗೂ ಮನವರಿಕೆಯಾಗಿದೆ. ಹೀಗಾಗಿ ಸಭಾಪತಿ ಸ್ಥಾನದಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂಬುದು ಪ್ರತಾಪಚಂದ್ರ ಶೆಟ್ಟಿಯವರ ರಾಜೀನಾಮೆ ಚಿಂತನೆಗೆ ಕಾರಣ ಎನ್ನಲಾಗಿದೆ.

ರಾಜೀನಾಮೆ ನೀಡಲು ಸ್ವತಃ ಸಭಾಪತಿಯೇ ಸಿದ್ಧರಿದ್ದರೂ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಅವರ ಮೇಲೆ ಒತ್ತಡ ಹೇರಿ ರಾಜೀನಾಮೆ ನೀಡದಿರುವಂತೆ ತಡೆಯೊಡ್ಡಿದ್ದಾರೆ. ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಯ ಪತ್ರ ಸಲ್ಲಿಸಿದಾಗಲೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರತಾಪಚಂದ್ರ ಶೆಟ್ಟಿ ಮುಂದಾಗಿದ್ದರು. ಆದರೆ ಜೆಡಿಎಸ್ ಧೋರಣೆಯನ್ನು ರಾಜ್ಯದ ಜನರಿಗೆ ಗೊತ್ತುಪಡಿಸುವ ರಾಜಕೀಯ ತಂತ್ರಗಾರಿಕೆ ಹೂಡಿದ್ದ ಕಾಂಗ್ರೆಸ್ ನಾಯಕರು, ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡದಂತೆ ನೋಡಿಕೊಂಡಿದ್ದರು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net