

ಬೆಂಗಳೂರು: ಅದೆಷ್ಟೋ ಮಂದಿ ಕೋವಿಡ್-19 ಪಾಸಿಟಿವ್ ದೃಢಪಟ್ಟ ತಕ್ಷಣ ನೆಗೆಟಿವ್ ಆಗಿ ಯೋಚಿಸುವುದೇ ಜಾಸ್ತಿ. ಹಾಗಂತ ಕೋವಿಡ್-19 ಪಾಸಿಟಿವ್ ವರದಿ ಬಂದು ದೃಢಪಟ್ಟ ಮೇಲೂ ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳದೆ ಪಾಸಿಟಿವ್ ಅಪ್ರೋಚ್ನಿಂದ ಪರಿಸ್ಥಿತಿ ಎದುರಿಸಿದವರಿಗೇನೂ ಕಡಿಮೆ ಇಲ್ಲ. ಅಂಥವರ ಪಟ್ಟಿಗೆ ಈಗ ಹಿರಿಯ ಪೊಲೀಸ್ ಅಧಿಕಾರಿ, ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಕೂಡ ಸೇರಿದ್ದಾರೆ.
ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದನ್ನು ಡಿ. 9ರಂದು ಟ್ವಿಟರ್ ಮೂಲಕ ಅವರು ಹಂಚಿಕೊಂಡಿದ್ದರು. ಕೋವಿಡ್ ಸೋಂಕು ಕೊನೆಗೆ ನನಗೂ ತಗುಲಿದೆ. ಕೋವಿಡ್ ಪಾಸಿಟಿವಿಟಿಯನ್ನು ಪಾಸಿಟಿವ್ ಅಪ್ರೋಚ್ನಿಂದಲೇ ಸ್ವೀಕರಿಸಲು ಪ್ರಯತ್ನಿಸುತ್ತೇನೆ. ಸಿಹಿ-ಕಹಿ ಅನುಭವಗಳ ಗುಚ್ಛವೇ ಜೀವನ ಎಂದು ಹೇಳಿಕೊಂಡಿದ್ದ ಅವರು ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮತ್ತೊಮ್ಮೆ ಪರೀಕ್ಷಿಸಿಕೊಂಡು ಕೋವಿಡ್-19 ನೆಗೆಟಿವ್ ಬಂದಿದ್ದು, ಸೋಂಕುಮುಕ್ತಗೊಂಡ ಹಿನ್ನೆಲೆಯಲ್ಲಿ ಅವರು ಸಂತೋಷ ಪಟ್ಟಿದ್ದಾರೆ. ಆ ಸಂತೋಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಜತೆಗೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯ ಸಂದೇಶವನ್ನೂ ಸಾರಿದ್ದಾರೆ.
ಕೋವಿಡ್ ಚಿಕಿತ್ಸೆ ಪಡೆದ ಬಳಿಕ ಅತ್ಯಾಪ್ತರೊಂದಿಗೆ ಮತ್ತೆ ಸಮಯ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ಬಹುಶಃ ಮಂಗಳವಾರ ಮತ್ತೆ ಕರ್ತವ್ಯಕ್ಕೆ ಹಿಂದಿರುಗುತ್ತೇನೆ ಎಂದು ಅಲೋಕ್ ಕುಮಾರ್ ಹೇಳಿಕೊಂಡಿದ್ದಾರೆ. ಜತೆಗೆ, ಲಸಿಕೆ ಬಂದು ನೀವು ಅದನ್ನು ತೆಗೆದುಕೊಳ್ಳುವವರೆಗೂ ಆ ಕುರಿತ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಬೇಡಿ ಎಂದೂ ಕಿವಿಮಾತು ಹೇಳಿದ್ದಾರೆ.
ಚಿಕಿತ್ಸೆ ಮುಗಿಸಿ ಮನೆಗೆ ಮರಳಿರುವ ಅಲೋಕ್ ಕುಮಾರ್ ಲೋಕಾಭಿರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಕೋವಿಡ್ ನೆಗೆಟಿವ್ ಬಂದ ಬಳಿಕವೂ ಅವರು ಪಾಸಿಟಿವ್ ಗುಂಗಿನಲ್ಲಿದ್ದಾರೆ. ಅರ್ಥಾತ್, ಆರಾಮದ ಸಮಯವನ್ನು ಅವರು 'ಪಾಸಿಟಿವ್ ಹೆಲ್ತ್' ಎಂಬ ಪುಸ್ತಕ ಓದಲೂ ವಿನಿಯೋಗಿಸುತ್ತಿದ್ದಾರೆ. ಮತ್ತೊಂದೆಡೆ ಕೋವಿಡ್ ನೆಪದಲ್ಲಾದರೂ ಮನೆಯಲ್ಲುಳಿದ ತಂದೆಯೊಂದಿಗೆ ಸಮಯ ಕಳೆಯಲು ಅವಕಾಶ ಸಿಕ್ಕಿರುವುದಕ್ಕೆ ಅವರ ಪುತ್ರಿ ಕೂಡ ಸಂತೋಷಗೊಂಡಿದ್ದಾರೆ. ಅದೇ ಖುಷಿಯಲ್ಲಿ ಕೇಕ್ ಆರ್ಡರ್ ಮಾಡಿದ ಪುತ್ರಿ, ಅದರ ಮೇಲೆ 'ವೆಲ್ಕಮ್ ಬ್ಯಾಕ್ ಪಪ್ಪ' ಎಂದು ಬರೆಸಿ ತರಿಸಿ ಕತ್ತರಿಸಿದ್ದಾರೆ.