ಚುನಾವಣಾ ರಾಜಕೀಯಕ್ಕೆ ಪ್ರತಾಪಚಂದ್ರ ಶೆಟ್ಟಿ ಗುಡ್​ಬೈ

Prathapchandra Shetty
Published on

ಕುಂದಾಪುರ(ಉಡುಪಿ): ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಚುನಾವಣಾ ರಾಜಕೀಯಕ್ಕೆ ಗುಡ್​ಬೈ ಹೇಳಿದ್ದಾರೆ. ‘ವಿಜಯವಾಣಿ’ ಜತೆ ಮಾತನಾಡಿದ ಅವರು, ನಾವೇ ಹಲವು ವರ್ಷ ರಾಜಕೀಯ ಕ್ಷೇತ್ರದಲ್ಲಿದ್ದರೆ ಸೆಕೆಂಡ್ ಜನರೇಶನ್ ನಾಯಕರು ಅವಕಾಶ ವಂಚಿತರಾಗುತ್ತಾರೆ. ಮುಂದಿನ ತಲೆಮಾರಿನ ನಾಯಕರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು. ಕಾಂಗ್ರೆಸ್ ಬಯಸಿದರೆ ಪಕ್ಷದಲ್ಲಿ ಕೆಲಸ ಮಾಡುತ್ತೇನೆ. ಉಡುಪಿ ಜಿಲ್ಲಾ ರೈತ ಸಂಘದ ಮೂಲಕ ಮತ್ತಷ್ಟು ಸಾಮಾಜಿಕ ಹಾಗೂ ರೈತರ ಪರ ಕೆಲಸ ಮಾಡುವ ಚಿಂತನೆಯಿದೆ ಎಂದರು.

ಸಚಿವರಾಗಲೇ ಇಲ್ಲ: ಶೆಟ್ಟರು ವಿಧಾನಸಭಾ ಚುನಾವಣೆಯಲ್ಲಿ ಒಮ್ಮೆ ಸೋತರೂ, ನಂತರ ನಾಲ್ಕು ಬಾರಿ ಶಾಸಕರಾದವರು. ಪರಿಷತ್​ಗೆ ಹ್ಯಾಟ್ರಿಕ್ ಪ್ರವೇಶ ಪಡೆದರೂ ಸಚಿವ ಸ್ಥಾನ ಒಲಿಯಲಿಲ್ಲ. ಪರಿಷತ್ ಮಾಜಿ ಸಭಾಪತಿಯೂ ಆಗಿದ್ದ ಅವರ ಸದಸ್ಯತ್ವ ಅವಧಿ ಮುಕ್ತಾಯಗೊಳ್ಳಲಿದೆ. ಪರಿಷತ್ ಸಭಾಪತಿ ಸ್ಥಾನಕ್ಕೇರಿದ ದ.ಕ.,ಉಡುಪಿ ಜಿಲ್ಲೆಯ ಮೊದಲ ಶಾಸಕ ಎನ್ನುವ ಖ್ಯಾತಿ ಅವರದು. ಯಡಿಯೂರಪ್ಪ, ಸಿದ್ದರಾಮಯ್ಯ ಜತೆ 1983ರಲ್ಲಿ ವಿಧಾನಸಭೆ ಪ್ರವೇಶಿಸಿದ್ದ ಅವರು, ವಾರಾಹಿ ಏತ ನೀರಾವರಿ ಯೋಜನೆ ವಿರುದ್ಧ ಧರಣಿ ಮೂಲಕ ರಾಜ್ಯದ ಗಮನ ಸೆಳೆದವರು. 1999ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ 1,140 ಮತಗಳ ಅಂತರದಲ್ಲಿ ಪರಾಭವಗೊಂಡ ನಂತರ 2004ರಲ್ಲಿ ಪರಿಷತ್​ಗೆ ಆಯ್ಕೆ ಆಗಿದ್ದರು. 2010ರಲ್ಲಿ ಪರಿಷತ್​ಗೆ ಅವಿರೋಧ ಆಯ್ಕೆಯಾಗಿ ಅರ್ಜಿ ಸಮಿತಿ ಸದಸ್ಯರಾದರು. 2016ರಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೊಷಿಸಿದ್ದಾಗ, ಕಾರ್ಯಕರ್ತರು ಧರಣಿ ಕುಳಿತು ನಿರ್ಧಾರ ಬದಲಿಸುವಂತೆ ಒತ್ತಡ ಹೇರಿದ್ದರು. ಪಕ್ಷ ಮುಖಂಡರ ಒತ್ತಾಯಕ್ಕೂ ಅವರು ಹಿಂದೆ ಸರಿಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net