

ಬೈಂದೂರು: ಉಪ್ಪುಂದ ಗ್ರಾಪಂಗೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಬುಧವಾರ ಭೇಟಿ ನೀಡಿದರು. ಕುಡಿಯುವ ನೀರಿನ ತಪಾಸಣೆ ಮಾಡಿ, ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಅಪೂರ್ಣ ಕಾಮಗಾರಿ ಬಗ್ಗೆ ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಮತ್ತು ಸದಸ್ಯರಲ್ಲಿ ಚರ್ಚಿಸಿದರು. ಗ್ರಾಪಂ ಬಳಿ ಇರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕುಡಿಯುವ ನೀರು ಮತ್ತು ಪೌಷ್ಟಿಕ ಆಹಾರದ ಬಗ್ಗೆ ವಿಚಾರಿಸಿದರು. ವಿಶೇಷವಾಗಿ ಪರಿಶಿಷ್ಟ ಪಂಗಡದ ಮಂಜಮ್ಮ ಅವರ ಮನೆಗೆ ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಪಂ ಎಲ್ಲರನ್ನು ಒಳಗೊಂಡ ಸಮಿತಿ ರಚನೆ ಮಾಡಿ ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಸಲಹೆ ನೀಡಿದರು. ಸ್ಥಳ ವೀಕ್ಷಣೆಯಲ್ಲಿ ಜಿಪಂ ಉಪಕಾರ್ಯದರ್ಶಿ, ತಾಪಂ ನಿರ್ವಹಣಾಧಿಕಾರಿ ಎನ್.ಭಾರತಿ, ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಪಿಡಿಒ ಸುದರ್ಶನ್, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.