ಶೀಘ್ರದಲ್ಲಿ ಪ್ರತಾಪ್ ಸಿಂಹಗೆ ಯತ್ನಾಳ್ ಸ್ಥಿತಿ

ಶೀಘ್ರದಲ್ಲಿ ಪ್ರತಾಪ್ ಸಿಂಹಗೆ ಯತ್ನಾಳ್ ಸ್ಥಿತಿ
Published on

ಸೋಮವಾರಪೇಟೆ: ಮಾಜಿ ಸಂಸದ ಪ್ರತಾಪ್‌ಸಿಂಹ ಅವರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರಿಸ್ಥಿತಿ ಬರಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಹೇಳಿದರು.

ಕೆಟ್ಟ ಬಾಯಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಪಕ್ಷದಲ್ಲಿ ಭವಿಷ್ಯವಿಲ್ಲ. ಪಕ್ಷವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಒಂದೆರಡು ತಿಂಗಳಲ್ಲೇ ಬಿಜೆಪಿ ಅವರನ್ನು ಉಚ್ಚಾಟಿಸಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣದಲ್ಲಿ ವಿನಾಕಾರಣ ಜಿಲ್ಲೆಯ ಇಬ್ಬರು ನಿಷ್ಠಾವಂತ ಶಾಸಕರ ಹೆಸರುಗಳನ್ನು ಎಳೆತಂದು ಬಿಜೆಪಿ ನಾಯಕರು ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.

ಸೋಮವಾರಪೇಟೆ ಸಮೀಪದ ಯಡೂಂಡೆ ಗ್ರಾಮದ ಯುವಕ ವಿನಯ್ ಜೀವ ಕಳೆದುಕೊಂಡಿರುವುದು ನಮಗೂ ನೋವು ತಂದಿದೆ. ಆದರೆ ಬಿಜೆಪಿ ಸತ್ತವರ ಹೆಣವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಅಸಹ್ಯ ಹುಟ್ಟಿಸುವಂತದ್ದು ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮೇಲೆ, ಮುಂದಾಗುವ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇರಬೇಕು. ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಿಲ್ಲ. ಪಕ್ಷದ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡರೆ ಬಿಜೆಪಿಗೆ ಒಂದಷ್ಟು ಲಾಭವಾಗಬಹುದು. ಆದರೆ ಹೋದ ಜೀವವನ್ನು ಹೆತ್ತವರಿಗೆ ತಂದು ಕೊಡಲು ಸಾಧ್ಯವಿಲ್ಲ. ಅವರ ಹೆಂಡತಿ, ಮಕ್ಕಳ ಭವಿಷ್ಯವನ್ನು ರೂಪಿಸಿವುದಕ್ಕೆ ಪಕ್ಷ ಬರುವುದಿಲ್ಲ. ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸ್ವಂತಿಕೆ, ಜ್ಞಾನವನ್ನು ರಾಜಕೀಯ ಪಕ್ಷಗಳಿಗೆ ಮಾರಿಕೊಳ್ಳಬಾರದು. ವಿದ್ಯಾವಂತರೆನಿಸಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಇನ್ನೊಬ್ಬರ ತೇಜೋವಧೆ ಮಾಡಬಾರದು. ಕಾನೂನು ಬಲಿಷ್ಠವಾಗಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿದರು.

ವಿನಯ್ ಆತ್ಮಹತ್ಯೆಯ ವಿಷಯದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರನ್ನು ಪ್ರತಾಪ್‌ಸಿಂಹ ನಿಂದಿಸುತ್ತಿದ್ದಾರೆ. ಕಳೆದ 10 ವರ್ಷ ಸಂಸದರಾಗಿದ್ದ ಸಂದರ್ಭ ಕೊಡಗಿಗೆ ಪ್ರತಾಪ್ ಸಿಂಹರ ಕೊಡುಗೆ ಶೂನ್ಯ. ಕೊಡಗಿಗೆ ರೈಲು ತರುತ್ತೇನೆ ಎಂದು ರೈಲು ಬಿಟ್ಟಿದ್ದು ಬಿಟ್ಟರೆ, ಅಭಿವೃದ್ಧಿ ಕೆಲಸ ಮಾಡಿಲ್ಲ. ಕಳೆದ ಒಂದೂವರೆ ವರ್ಷಗಳಲ್ಲಿ ಈಗಿನ ಇಬ್ಬರೂ ಶಾಸಕರು ಕೋಟಿಗಟ್ಟಲೆ ಅನುದಾನ ತಂದಿದ್ದಾರೆ. ಕೊಡಗಿನಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದ್ದು, ಬಿಜೆಪಿಯ ಮಾಜಿಗಳಿಗೆ ಈಗ ನಡುಕ ಪ್ರಾರಂಭವಾಗಿ, ಹೆಣ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿ, ಕೊಡಗಿನಲ್ಲಿ ಪೇಪರ್ ಸಿಂಹ ಎಂದು ಪ್ರತಾಪ್‌ಸಿಂಹ ಅವರನ್ನು ಜನರು ಕರೆಯುತ್ತಾರೆ. ಸಂಸದರಾಗಿದ್ದ ಸಂದರ್ಭದಲ್ಲಿ ಕೊಡಗಿಗೆ ಬರದ ಪ್ರತಾಪ್‌ಸಿಂಹ, ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಮೇಲೆ ರಾತ್ರೋರಾತ್ರಿ ಬಂದು ಕೂಗಾಡಿ, ಚೀರಾಡಿ ಹೋಗಿದ್ದಾರೆ. ಪ್ರಧಾನಿ ಮೋದಿ ಹೆಸರಿನಲ್ಲಿ ಗೆದ್ದ ವ್ಯಕ್ತಿಗೆ ಕಳೆದ ಸಾಲಿನಲ್ಲಿ ಟಿಕೆಟ್ ಸಿಕ್ಕಿಲ್ಲ. ಜಿಲ್ಲೆಯ ಶಾಸಕರನ್ನು ಟೀಕಿಸಿದರೆ ಮುಂದೆ ಟಿಕೆಟ್ ಸಿಗಬಹುದು ಎಂಬ ಭ್ರಮೆಯಲ್ಲಿ ಇದ್ದಾರೆ ಎಂದು ಹೇಳಿದರು.

ಜಿಲ್ಲೆಯ ಶಾಸಕರು ಜಿಲ್ಲೆಯ ಅಭಿವೃದ್ಧಿ ಕಡೆ ಗಮನಹರಿಸಿದ್ದಾರೆ. ಸಲ್ಲದ ವಿಷಯಗಳಿಗೆ ಪ್ರತಿನಿತ್ಯ ಪ್ರತಿಭಟನೆ ಮಾಡುತ್ತ, ಸಾರ್ವಜನಿಕರಿಗೆ ತೊಂದರೆ ನೀಡಿ, ಸರ್ಕಾರಿ ಅಧಿಕಾರಿಗಳ ಸಮಯವನ್ನು ಹಾಳು ಮಾಡುತ್ತಿರುವ ಬಿಜೆಪಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣಗಳನ್ನು ದಾಖಲಿಸಿ, ಪ್ರಮುಖರ ಪುಂಡಾಟವನ್ನು ಹತ್ತಿಕ್ಕಬೇಕು ಎಂದು ಆಗ್ರಹಿಸಿದರು. ತಪ್ಪಿದಲ್ಲಿ ಬಿಜೆಪಿ ಬೆದರಿಕೆಗಳಿಗೆ ಕಾಂಗ್ರೆಸ್ ಬಗ್ಗುವುದಿಲ್ಲ, ಜಗ್ಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಎಸ್.ಎಂ.ಚಂಗಪ್ಪ, ಕೆ.ಎ.ಆದಂ, ಎಚ್.ಆರ್.ಸುರೇಶ್, ಶೀಲಾ ಡಿಸೋಜ, ಜಿ.ಎಂ.ಕಾಂತರಾಜ್, ಕಿರಣ್ ಉದಯಶಂಕರ್, ಚೇತನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net