

ತಿ.ನರಸೀಪುರ: ಪ್ರತಾಪ್ ಸಿಂಹ ಯಾರು? ಪ್ರತಾಪ ಸಿಂಹ ಯಾವ ಪಕ್ಷದಲ್ಲಿ, ಯಾವ ಹುದ್ದೆಯಲ್ಲಿದ್ದಾರೆ? ಅವರಿಗೆ ನಾನು ಯಾರು ಅಂತ ಹೇಳಿ ಉತ್ತರ ಕೊಡಲಿ? ಯಾವ ಹುದ್ದೆಯಲ್ಲಿದ್ದಾರೆ ಅಂತ ನಾನು ಅವರ ಹೇಳಿಕೆಗೆ ರಿಪ್ಲೇ ಮಾಡಲಿ? ಅಂತಹವರಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಕುಪ್ಯ ಗ್ರಾಮದಲ್ಲಿ ಗುರುವಾರ ಗ್ರಾಮ ದೇವತೆ ಶ್ರೀ ಮೂಗ ಮಾರಮ್ಮ ದೇವಾಲಯ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ತಂದೆಯವರು ಮುಖ್ಯಮಂತ್ರಿಯಾಗಿರುವ ತನಕ ನಾನು ಯಾವುದೇ ಹುದ್ದೆಯನ್ನು ಅಲಂಕರಿಸಲ್ಲ. ತಂದೆಯವರು ತಿಳಿಸುವ ತನಕ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದರು.
ಮೊದಲಿನಿಂದಲೂ ನಮ್ಮ ತಂದೆಯವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಹಗರಣದಲ್ಲಿ ಸಿಲುಕಿಸುವ ಯತ್ನ ನಡೆಯಿತು. ನನ್ನನ್ನು ಕೂಡ ಹಲವು ಬಾರಿ ಟಾರ್ಗೆಟ್ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಇಂತಹವುದಕ್ಕೆಲ್ಲಾ ಹೆದರಲ್ಲ. ಐದು ವರ್ಷ ತಂದೆಯವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಧಾರ್ಮಿಕ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸರ್ಕಾರದ ಅನುದಾನವನ್ನು ಮಂಜೂರು ಮಾಡಲು ಚಿಂತನೆ ಮಾಡಿರುವುದರಿಂದ ಕುಪ್ಯ ಗ್ರಾಮದಲ್ಲಿರುವ ಗ್ರಾಮ ದೇವತೆ ಶ್ರೀ ಮೂಗು ಮಾರಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ ಮೊದಲ ಹಂತದಲ್ಲಿ 5 ಲಕ್ಷ ರೂ. ಅನುದಾನವನ್ನು ಶಾಸಕರ ಪ್ರದೇಶ ಅಭಿವೃದ್ಧಿ ಹಣದಲ್ಲಿ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನವನ್ನು ಕಲ್ಪಿಸಿಕೊಡಲಾಗುವುದು ಎಂದು ಯತಿಂದ್ರ ಸಿದ್ದರಾಮಯ್ಯ ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಗವಿಸಿದ್ದಯ್ಯ, ಮಾಜಿ ಅಧ್ಯಕ್ಷ ರಘು, ಶ್ರೀ ಮಲೈ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಅಧ್ಯಕ್ಷೆ ಭಾಗ್ಯಮ್ಮ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ಜಿ.ಪಂ.ಮಾಜಿ ಸದಸ್ಯ ಕೆ.ಮಹದೇವ್, ಮೈಮುಲ್ ನಿರ್ದೇಶಕ ಸಿ.ಓಂಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ಕುರುಬರ ಸಂಘದ ಮಾಜಿ ಅಧ್ಯಕ್ಷ ತುಂಬಲ ಬಾಬು, ಪುರಸಭಾ ಸದಸ್ಯ ಎನ್.ಸೋಮು, ಡೇರಿ ಅಧ್ಯಕ್ಷ ಕೆ.ಬಿ.ಪ್ರಭಾಕರ್, ತಾ.ಪಂ ಮಾಜಿ ಅಧ್ಯಕ್ಷ ಅಂದಾನಿ, ಕುಪ್ಯ ಜಯರಾಮ್, ಮನ್ನೆಹುಂಡಿ ಪರಶಿವ, ಪಿಡಿಒ ಗಜೇಂದ್ರ ಕುಮಾರ್, ಕಾರ್ಯದರ್ಶಿ ನಾಗೇಂದ್ರ, ಚಿನ್ನಂಬಳ್ಳಿ ರಾಜು, ಗ್ರಾ.ಪಂ.ಅಧ್ಯಕ್ಷ ರಾಮನಂಜಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ವಕೀಲ ಎಂ.ಶಿವಪ್ರಸಾದ್, ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೋಸಿನ್ ಖಾನ್, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜದ್ ಖಾನ್ ಇತರರು ಇದ್ದರು.