

ಪಡುಬಿದ್ರಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸಾನಿಧ್ಯ ವೃದ್ಧಿ ಮತ್ತು ಲೋಕಕಲ್ಯಾಣಾರ್ಥನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದ ನವಚಂಡಿಯಾಗ ಫೆ.4ರಂದು ಸಂಪನ್ನಗೊಳ್ಳಲಿದೆ. ಆ ಪ್ರಯುಕ್ತ ದೇವಳದ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕುಮಾರಗುರು ಅವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ಉಪಸ್ಥಿತಿಯಲ್ಲಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಮುಖಂಡತ್ವದಲ್ಲಿ ಕುಂಕುಮ ಪ್ರಸಾದ ಮುಹೂರ್ತ ಮಂಗಳವಾರ ನೆರವೇರಿತು.
ನವದುರ್ಗಾ ಲೇಖನವನ್ನು ಬರೆದು ಅರ್ಪಿಸಿ, ನವಚಂಡೀಯಾಗದ ದಿನದಂದು ಸಂಕಲ್ಪದಲ್ಲಿ ಭಾಗಿಯಾಗಲಿರುವ ಭಕ್ತರಿಗೆ ನೀಡುವ ಕುಂಕುಮವನ್ನು ಮಾರಿಯಮ್ಮನಿಗೆ ಅರ್ಪಿಸಿ ಬ್ರಾಹ್ಮಣ ಸಂಘದ ಮಹಿಳೆಯರು ನಿರಂತರ ಲಕ್ಷ್ಮ್ಮಿ ಶೋಭಾನೆಯೊಂದಿಗೆ ಕುಂಕುಮ ಪ್ರಸಾದವನ್ನು ಪ್ಯಾಕೆಟ್‌ಗಳಿಗೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ನವದುರ್ಗಾ ಲೇಖನ ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ.ಶೆಟ್ಟಿ, ಕೋಶಾಧಿಕಾರಿ ಕೆ.ವಿಶ್ವನಾಥ್, ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಧವ ಆರ್.ಪಾಲನ್, ಶೇಖರ ಸಾಲ್ಯಾನ್, ಮನೋಹರ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ಬೀನಾ ವಾಸುದೇವ ಶೆಟ್ಟಿ, ನವದುರ್ಗಾ ಲೇಖನ ಯಜ್ಞದ ಮಹಿಳಾ ಸಮಿತಿ ಮುಖ್ಯ ಸಂಚಾಲಕಿ ಸಾವಿತ್ರಿ ಗಣೇಶ್ ಉಪಸ್ಥಿತರಿದ್ದರು.