ಮುಂದಿನ ಸಿಎಂ ಆಗೋರು ನಮ್ಮ ಸಮುದಾಯದ ನಾಯಕ; ಕೇಂದ್ರದಿಂದ ಪಕ್ಕಾ ಮಾಹಿತಿ ಬಂದಿದೆ ಅಂದ್ರು ಸ್ವಾಮೀಜಿ!

Swamiji
Published on

ಹಾವೇರಿ: ಮುಖ್ಯಮಂತ್ರಿ ಆಗುವವರು ನಮ್ಮ ಸಮುದಾಯದ ನಾಯಕನೇ, ಇದು ಕೇಂದ್ರದಿಂದ ನಮಗೆ ಬಂದ ಪಕ್ಕಾ ಮಾಹಿತಿ ಎಂದು ಶರಣಬಸವೇಶ್ವರ ಮಠಾಧಿಪತಿ ಪ್ರಣವಾನಂದ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹಾವೇರಿಯ ಪತ್ರಿಕಾಭವನದಲ್ಲಿ ಹೇಳಿಕೆ ನೀಡಿದ ಅವರು ಕರ್ನಾಟಕದಲ್ಲಿ ಪ್ರಶ್ನಾತೀಥ ನಾಯಕರೆಂದರೆ ಅದು ಬಿ.ಎಸ್.ಯಡಿಯೂರಪ್ಪನವರು. ಪಕ್ಷದ ಸಿದ್ಧಾಂತದ ಸಲುವಾಗಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆರ್ಯ ಈಡಿಗ ಸಮಾಜ 26 ಒಳಪಂಗಡ ಸೇರಿ 80 ಲಕ್ಷ ಜನರು ಕರ್ನಾಟಕದಲ್ಲಿ ಇದ್ದೇವೆ. ನಮ್ಮ ಎಲ್ಲಾ ಒಳಪಂಗಡದಿಂದ ಏಳು ಜನ ಶಾಸಕರು ಇದ್ದಾರೆ. ಅವರಲ್ಲಿ ಅತ್ಯಂತ ಹಿರಿಯ ನಾಯಕ ಯಾರಾದ್ರೂ ಇದ್ದರೆ ಅದು ಕೋಟಾ ಶ್ರೀನಿವಾಸ್ ಪೂಜಾರಿ ಅವರು ಎಂದರು.

ಶ್ರೀನಿವಾಸ್​ ಪೂಜಾರಿ ಅವರು ಯಾವುದೇ ಕಪ್ಪು ಚುಕ್ಕೆ ಇಲ್ಲದ ನಾಯಕ. ಭ್ರಷ್ಟಾಚಾರದ ಕಳಂಕವೂ ಇಲ್ಲ. ಇದರ ಜೊತೆಗೆ ಆರ್​ಎಸ್​ಎಸ್​ ಹಿನ್ನಲೆಯಿಂದ ಬಂದಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ನಾವು ಹೇಳಿದ್ದೇವೂ ಕೋಟಾ ಶ್ರೀನಿವಾಸ ಪೂಜಾರಿಯವರನ್ನ ಉಪಮುಖ್ಯಮಂತ್ರಿಯನ್ನಾದರೂ ಮಾಡಿ ಎಂದು ಆದರೆ ನೀವೂ ಮಾಡಲಿಲ್ಲ. ಆದರೆ ಈಗ ದೆಹಲಿ ಕೇಂದ್ರ ಮೂಲಗಳಿಂದ ಅವರೇ ಮುಖ್ಯಮಂತ್ರಿ ಆಗ್ತಾರೆ ಎಂಬ ಮಾಹಿತಿ ಬಂದಿದೆ. ಶ್ರೀನಿವಾಸ್ ಪೂಜಾರಿ ಅವರೇ ಸಿಎಂ ಆಗೋದು ಎಂದು ಶ್ರೀಗಳು ಓಪನ್ ಆಗಿ ಹೇಳಿದರು.

ಶ್ರೀನಿವಾಸ್​ ಪೂಜಾರಿ ಅವರಿಗೆ ಹಾಗೂ ನಮ್ಮ ಸಮುದಾಯಕ್ಕೆ ಅನ್ಯಾಯ ಆಗಿದೆ. ಬ್ರಹ್ಮಶ್ರೀ ನಾರಾಯಣ ನಿಗಮ ಮಂಡಳಿಯನ್ನು ಘೋಷಣೆ ಮಾಡಲಿಲ್ಲ. ಇದರ ಜೊತೆಗೆ ಸಮುದಾಯಕ್ಕೆ ಬರುವ ಕೆಪಿಎಸ್​ಸಿ ಸ್ಥಾನವನ್ನೆ ಕಿತ್ತು ಹಾಕಿದ್ದಾರೆ. ನಮ್ಮ ಸಮುದಾಯದ ಮಕ್ಕಳು ಹಾಗೂ ಜನರು ಬೀದಿಗೆ ಬಿದ್ದಿದ್ದಾರೆ. ಮಾಲೀಕಯ್ಯ ಗುತ್ತೆದಾರ ಅವರಿಗೂ ಅನ್ಯಾಯ ಮಾಡಿದ್ದೀರಿ, ಅವರಿಗೆ ಈ ಭಾರಿ ಮಂತ್ರಿ ಸ್ಥಾನವನ್ನು ಕೊಡಬೇಕು ಎಂದು ಸ್ವಾಮೀಜಿ ಒತ್ತಾಯ ಮಾಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net