

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪದ್ಮನಾಭನಗರ ಕ್ಷೇತ್ರದಲ್ಲಿ ಪ್ರಮೋದ್ ಶ್ರೀನಿವಾಸ್ ಕಾಂಗ್ರೆಸ್ ಶಾಸಕನಾಗುವುದು ಖಚಿತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪದ್ಮನಾಭನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಪದ್ಮನಾಭನಗರ ಮಹಾಪರ್ವ ಉತ್ಸವ’ ಹಾಗೂ ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ. ಬಿಜೆಪಿಯವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಜನರ ಬದುಕಿನ ಮೇಲೆ ನಾವು ರಾಜಕೀಯ ಮಾಡುತ್ತೇವೆ. ಜನರ ಕಷ್ಟ ಪರಿಹಾರ ಆಗಬೇಕೆಂಬ ನಿಟ್ಟಿನಲ್ಲಿ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ. ಈ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳು ಹೇಗೆ ಅನುಷ್ಠಾನವಾಗುತ್ತಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಪ್ರಮೋದ್ ಶ್ರೀನಿವಾಸ್ ಕೊಟ್ಟಿರುವ ಜವಾಬ್ದಾರಿ ಮತ್ತು ಮಾರ್ಗದರ್ಶವನ್ನು ಚಾಚೂತಪ್ಪದೆ ಮಾಡುತ್ತಿದ್ದಾರೆ. ಅವರಿಗೆ ಜನರು ಸಹಕಾರ ನೀಡುತ್ತಿರುವುದನ್ನು ನೋಡುತ್ತಿದ್ದರೆ 2028ರಲ್ಲಿ ಈ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್ ಶಾಸಕನಾಗುವುದು ಖಚಿತ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಬದಲಾವಣೆ ನಿಶ್ಚಿತ. ಹಿಂದೆ ಶ್ರೀನಿವಾಸ್ ಅವರಿಗೆ ಬಿಾರಂ ಕೊಡುತ್ತೇನೆ ಎಂದು ಹೇಳಿದ್ದರೂ ನಮ್ಮ ಪಕ್ಷಕ್ಕೆ ಬರಲಿಲ್ಲ. ಅವರಲ್ಲಿ ಸ್ವಾಮಿನಿಷ್ಠೆ ಇತ್ತು. ಇದೀಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಕ್ಷೇತ್ರದ ಜನರು ಹಸ್ತವನ್ನು ಕೈಹಿಡಿಯಬೇಕು. ಕ್ಷೇತ್ರದಲ್ಲಿ ಪ್ರಮೋದ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತದೆ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪ್ರಮೋದ್ ನಾಯಕನಾಗಿ ಬೆಳೆಯಬೇಕು. ಇದಕ್ಕೆ ಎಲ್ಲ ಮುಖಂಡರು ಸಹಕಾರ ನೀಡಬೇಕು. ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ನೀಡಬೇಕು. ಸ್ಥಳೀಯರು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಡಿಕೆಶಿ ಕರೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಎಂ.ವಿ.ಪ್ರಸಾದ್ ಬಾಬು, ಗುರಪ್ಪ ನಾಯ್ಡು, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಸೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆ:
ಕ್ಷೇತ್ರದಲ್ಲಿ ನಮ್ಮ ಪಕ್ಷವನ್ನು ಬಲಪಡಿಸುತ್ತಿದ್ದೇವೆ. ಬೇರೆಯವರ ಜೀವನದಲ್ಲಿ ಖುಷಿಯಾಗಿದ್ದರೆ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. 40 ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ಛಲ ಇಟ್ಟುಕೊಂಡಿದ್ದೇವೆ ಎಂದು ಪದ್ಮನಾಭನಗರ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಹೇಳಿದರು.
ಪದ್ಮನಾಭನಗರ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರನ್ನಾಗಿ ಪ್ರಮೋದ್ ಶ್ರೀನಿವಾಸ್ ಅವರನ್ನು ಮಾಡಲಾಗಿತ್ತು. ಒಂದು ವರ್ಷದಲ್ಲಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತಿದೆ.ಬಿಜೆಪಿಯವರು ಹೊಟ್ಟೆ ತುಂಬಿರುವ ಜನಕ್ಕೆ ಮಾತ್ರ ಬೆಂಬಲ ಕೊಡುತ್ತಾರೆ. ಆದರೆ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ನಾವು ಬೆಂಬಲ ನೀಡುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪಿದೆ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.