ಕಾಂಗ್ರೆಸ್ ಅಶಿಸ್ತಿನ ಪಕ್ಷ, ಅಲ್ಲಿ ಮುಂದಿನ ಚುನಾವಣೆಗೂ ಮುನ್ನ ಆಗಲಿದೆ ದೊಡ್ಡ ಸ್ಫೋಟ: ಪ್ರಮೋದ್ ಮಧ್ವರಾಜ್​

DKS PM
Published on

ಉಡುಪಿ: ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದು, ಅದಕ್ಕೆ ಪ್ರಮೋದ್ ಈಗ ಪ್ರತ್ಯುತ್ತರ ನೀಡಿದ್ದಾರೆ.

ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಿಂದ ಯಾವುದೇ ನಷ್ಟವಾಗಿಲ್ಲ ಎಂದಿರುವ ಡಿ.ಕೆ.ಶಿವಕುಮಾರ್, ಪ್ರಮೋದ್ ಮಧ್ವರಾಜ್ ಪಶ್ಚಾತ್ತಾಪ ಪಡುವ ದಿನ ಹತ್ತೀರವೇ ಇದೆ ಎಂದಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಪ್ರಮೋದ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್​ ಅಶಿಸ್ತಿನ ಪಕ್ಷ ಎಂದೂ ಜರಿದಿದ್ದಾರೆ.

ಉಡುಪಿಯಲ್ಲಿ ಮಾತನಾಡಿರುವ ಪ್ರಮೋದ್​, ನಾನು ಅಶಿಸ್ತಿನ ಪಕ್ಷದಿಂದ ಬಂದವನು, ಬಿಜೆಪಿಯ ಶಿಸ್ತನ್ನು ನೋಡುವಾಗ ಹೆಮ್ಮೆ-ಸಂತೋಷ ಆಗುತ್ತದೆ. ಕಾಂಗ್ರೆಸ್​ಗೂ ಬಿಜೆಪಿಗೂ ಇರುವ ಸಂಘಟನಾತ್ಮಕ ವ್ಯತ್ಯಾಸದ ಅರಿವು ಆಗಿದೆ. ಬಿಜೆಪಿ ಬಹಳ ಶಿಸ್ತಿನ ಪಕ್ಷ, ಸಂಘಟನೆಯ ಬಗ್ಗೆ ಬಹಳಷ್ಟು ಒತ್ತು ಕೊಡುತ್ತಾರೆ. ಆದರೆ ಕಾಂಗ್ರೆಸ್ ಸಂಘಟನೆಯ ಕಡೆಗೆ ಏನೂ ಗಮನ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಂಪ್ರದಾಯಕ್ಕೂ ಬಿಜೆಪಿ ಸಂಪ್ರದಾಯಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಕಾಂಗ್ರೆಸ್ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ. ಎಲ್ಲರೂ ವೇದಿಕೆಗೆ ಹತ್ತುವವರೇ ಇರುವುದು. ಬಿಜೆಪಿಯಲ್ಲಿ ಹಾಗಿಲ್ಲ, ಶಿಸ್ತಿದೆ. ಬಿಜೆಪಿಯಲ್ಲಿ ಮಂತ್ರಿ, ಶಾಸಕ, ಸಂಸದರು ಕೂಡ ಕೆಳಗೆ ಕುಳಿತು ಕೊಳ್ಳುತ್ತಾರೆ. ಬಿಜೆಪಿಯ ಸಂಪ್ರದಾಯವನ್ನು ಡಿ.ಕೆ.ಶಿವಕುಮಾರ್ ಕಲಿಯವುದು ಒಳ್ಳೆಯದು. ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ, ಬಿಜೆಪಿಗೆ ಕಾರ್ಯಕರ್ತನಾಗಿ ಸೇರಿದ್ದೇನೆ, ಕಾರ್ಯಕರ್ತನೊಟ್ಟಿಗೆ ಕುಳಿತುಕೊಳ್ಳುತ್ತೇನೆ. ಇದರಲ್ಲಿ ನನಗೆ ಯಾವ ಮುಜುಗರ-ಬೇಸರ ಇಲ್ಲ ಎಂದು ಪ್ರಮೋದ್ ಮಾತಲ್ಲೇ ಎದಿರೇಟು ನೀಡಿದ್ದಾರೆ.

ನಾನು ಯೋಚನೆ ಮಾಡಿಯೇ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ನಾನು ಪಶ್ಚಾತ್ತಾಪ ಪಡುವ ಪ್ರಮೇಯವೇ ಬರುವುದಿಲ್ಲ. ಆದರೆ ಉಡುಪಿ ಜಿಲ್ಲೆಯಲ್ಲಿ ನನ್ನನ್ನು ಕಳೆದುಕೊಂಡು ಕಾಂಗ್ರೆಸ್​ ಪಶ್ಚಾತ್ತಾಪ ಪಡುವ ದಿನ ದೂರ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಶ್ಚಾತ್ತಾಪ ಪಡುತ್ತದೆ. ಮಾತ್ರವಲ್ಲ, ಮುಂದಿನ ಚುನಾವಣೆಗೂ ಮುನ್ನ ಕಾಂಗ್ರೆಸ್​ನಲ್ಲಿ ದೊಡ್ಡಮಟ್ಟದ ಸ್ಫೋಟ ಆಗುತ್ತದೆ. ಟಿಕೆಟ್ ಹಂಚಿಕೆಯ ಸಂದರ್ಭದಲ್ಲಂತೂ ದೊಡ್ಡ ಸ್ಫೋಟವೇ ಆಗುತ್ತದೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಭಿನ್ನಮತ ಸ್ಫೋಟಗೊಳ್ಳಲಿದೆ ಎಂದು ಪ್ರಮೋದ್ ಭವಿಷ್ಯ ನುಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net