

ತುಮಕೂರು: ನಾಟಕಗಳು ಜೀವಂತಿಕೆಯ ಸಂಕೇತ. ರಂಗಭೂಮಿ ಮೂಲಕ ಇಡೀ ರಾಜ್ಯ ಹಾಗೂ ಭಾರತವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೇಳಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ವತಿಯಿಂದ ಆಯೋಜಿಸಿದ್ದ ಪ್ರಕಾಶ್ ರೈ ಅರ್ಪಿಸಿದ ನಿರ್ದಿಗಂತ ತಂಡ ಅಭಿನಯಿಸಿದ ‘ಗಾಯಗಳು’ ನಾಟಕ ಪ್ರದರ್ಶನದಲ್ಲಿ ಮಾತನಾಡಿದ ಅವರು, ಜಿಲ್ಲೆ ಯಾವತ್ತೂ ರಂಗಭೂಮಿಗೆ ಪ್ರೋತ್ಸಾಹ ಮಾಡುತ್ತಲೇ ಬಂದಿದೆ. ಗುಬ್ಬಿ ವೀರಣ್ಣ ಸೇರಿದಂತೆ ಹಲವಾರು ಮಂದಿ ರಂಗ ದಿಗ್ಗಜರು ಇದೇ ಜಿಲ್ಲೆಯವರಾಗಿದ್ದು ಪೌರಾಣಿಕ ನಾಟಕಗಳು ಇಲ್ಲಿ ನಿರಂತರವಾಗಿ ನಡೆಯುತ್ತಿರುವುದು ರಂಗಭೂಮಿ ಜೀವಂತವಾಗಿರುವುದಕ್ಕೆ ಸಾಕ್ಷಿ ಎಂದರು.
ಹೊಸ ಹೊಸ ರಂಗ ತಂಡಗಳನ್ನು ವಿಭಿನ್ನ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡು ಜನರ ಮುಂದೆ ಪ್ರದರ್ಶನ ನೀಡುತ್ತಿರುವುದು ಸಂತಸದ ವಿಷಯ. ರಂಗ ಸಜ್ಜಿಕೆ, ನಿರ್ದೇಶನ, ಕಥಾ ಆಯ್ಕೆ. ಹೀಗೆ ಬಹು ಆಯಾಮಗಳಲ್ಲಿ ಹೊಸ ನಿರ್ದೇಶಕರು ತೊಡಗಿಸಿಕೊಂಡಿರುವುದು ಖುಷಿಯ ವಿಚಾರ. ವೃತ್ತಿನಿರತ, ಹವ್ಯಾಸಿ ಹೀಗೆ ಪ್ರತಿಯೊಬ್ಬ ರಂಗಕರ್ಮಿಯೂ ಕೂಡ ರಂಗಭೂಮಿಯನು ಬೆಳಸುತ್ತಲೇ ಬಂದಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೂಡ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿರುವುದು ಸಂತಸದ ವಿಷಯ. ಇದು ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ಅವರು ಆಶಿಸಿದರು.
ಈಗಾಗಲೇ ತುಮಕೂರಿನಲ್ಲಿ ನೀನಾಸಂ, ರಂಗಾಯಣ, ಸಾಣೆಹಳ್ಳಿ ಶಿವಸಂಚಾರ ಸೇರಿದಂತೆ ಪ್ರಮುಖ ರೆಪರ್ಟರಿಗಳು ಪ್ರದರ್ಶನ ಮಾಡಿ ಹೋಗಿದೆ. ಹಾಗೆಯೇ ರಾಷ್ಟ್ರೀಯ ನಾಟಕ ಶಾಲೆಯ ಡ್ರಾಮಾಗಳು ಇಲ್ಲಿ ಪ್ರದರ್ಶನ ನೀಡಿರುವುದು ತುಮಕೂರು ರಂಗಭೂಮಿಗೆ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ದ್ಯೋತಕ ಎಂದರು.
ರಂಗ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಹೊಸ ಕಾಲದ ನಿರ್ದೇಶಕರು ಹೊಸ ಭಾಷೆಯಲ್ಲಿ, ಹೊಸ ಪರಿಕರಗಳಲ್ಲಿ ನಾಟಕಗಳನ್ನು ಕಟ್ಟುತ್ತಿರುವುದು ವಿಶೇಷ. ತುಮಕೂರಿನಲ್ಲಿ ಪ್ರಯೋಗಾತ್ಮಕ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನ ಕಾಣುತ್ತಿರುವುದು ಸಂತಸದ ಸಂಗತಿ. ನೀನಾಸಂ ನಾಟಕಗಳು ಕಳೆದ 2 ದಶಕಗಳಿಂದ ತುಮಕೂರಿನಲ್ಲಿ ನಿರಂತರವಾಗಿ ಪ್ರದರ್ಶನ ಕಾಣುತ್ತಿದೆ. ಹಾಗೆಯೇ ಹೊಸ ಹೊಸ ಹುಡುಗರು ತಾವು ಆರಂಭಿಸಿರುವ ರೆಪರ್ಟರಿಗಳ ನಾಟಕಗಳು ಕೂಡ ತುಮಕೂರಿನಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ತಿಳಿಸಿದರು.
ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಹಾಗೂ ಶಾರದಾಂಬ ಟ್ರಸ್ಟ್‌ನ ಅಧ್ಯಕ್ಷೆ ಯಶೋದಾ ಉಪಸ್ಥಿತರಿದ್ದರು.