ಪ್ರಜಾಸೌಧ ಆಡಳಿತ ಭವನಕ್ಕೆ ಶೀಘ್ರ ಚಾಲನೆ

25 gkp 3.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಜತೆ ಸಮಾಲೋಚನೆ ನಡೆಸುತ್ತಿರುವ ಕೃಷ್ಣ ಬೈರೇಗೌಡ
Published on

ಗೋಣಿಕೊಪ್ಪಲು: ಪೊನ್ನಂಪೇಟೆಯ ತಹಸೀಲ್ದಾರರ ಕಚೇರಿಗೆ ಶುಕ್ರವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಭೂ ಸುರಕ್ಷತೆ ಮತ್ತು ಕಂದಾಯ ದಾಖಲೆ ಡಿಜಿಟಲೀಕರಣ ಪ್ರಕ್ರಿಯೆ ಸಂಬಂಧ ಮಾಹಿತಿ ಪಡೆದರು.

ಸರ್ಕಾರ ಭೂಸುರಕ್ಷತಾ ಯೋಜನೆಯಡಿ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಕಲ್ಪಿಸುತ್ತಿರುವ ಹಿನ್ನೆಲೆ ತಹಸೀಲ್ದಾರರ ಕಚೇರಿಯಲ್ಲಿ ಯಾವ ರೀತಿ ಅಪ್‌ಡೇಟ್ ಮಾಡಿದ್ದಾರೆ ಎಂಬ ಬಗ್ಗೆ ಸಚಿವರು ಮಾಹಿತಿ ಪಡೆದರು. ಸರ್ಕಾರ ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆ ತಂದಿದ್ದು, ಅವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಕಂದಾಯ ಸಚಿವರು ಸೂಚಿಸಿದರು.

ಭೂ ದಾಖಲೆ ಸಂರಕ್ಷಣೆ ಸಂಬಂಧ ಹೊಸ ಹೊಸ ವಿಧಾನಕ್ಕೆ ಹೊಂದಿಕೊಂಡು ಸಾರ್ವಜನಿಕರಿಗೆ ಸಕಾಲದಲ್ಲಿ ನಾಗರಿಕ ಸೇವೆ ಒದಗಿಸಬೇಕು ಎಂದು ಕೃಷ್ಣಬೈರೇಗೌಡ ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

ಹೊಸ ಹೊಸ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ತ್ವರಿತವಾಗಿ ಕಲ್ಪಿಸಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಎಲ್ಲ ಹಂತದ ಸಿಬ್ಬಂದಿ ತಂಡವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ತಡೆಗೋಡೆ ನಿರ್ಮಾಣಕ್ಕೆ 50 ಕೋಟಿ ರೂ. ಮಂಜೂರು: ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಮಣ್ಣು, ಗುಡ್ಡ ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ 50 ಕೋಟಿ ರೂ. ಮಂಜೂರು ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರು ತಿಳಿಸಿದ್ದು, ಶೀಘ್ರ 50 ಕೋಟಿ ರೂ. ಹಣ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮುಖ್ಯಮಂತ್ರಿ ಅವರು ಪ್ರಾಕೃತಿಕ ವಿಕೋಪದಡಿ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಗೆ ಹಣ ಮಂಜೂರು ಮಾಡಲಿದ್ದಾರೆ. ಈ ಸಂಬಂಧ ಮಳೆಹಾನಿ ಪ್ರದೇಶ ವೀಕ್ಷಣೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಕೊಡಗು ಜಿಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪಟ್ಟೆದಾರರು ತಮ್ಮ ಭೂಮಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಹಕ್ಕುದಾರಿಕೆ ಒದಗಿಸಲಾಗುವುದು. 30-40 ವರ್ಷದ ಹಳೆಯದನ್ನು ಸರಿಪಡಿಸಲು ಮುಂದಾಗಿದ್ದೇವೆ. ಆ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಳೆ ಹಾನಿ ಪ್ರದೇಶ, ತಾಲೂಕು ಆಡಳಿತ ಭವನ ನಿರ್ಮಾಣದ ಜಾಗ, ಬಲ್ಯ ಮಂಡೂರು ಬಳಿಯ ಸೇತುವೆ ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು.

ಬಳಿಕ ಬಲ್ಯಮಂಡೂರು ಗ್ರಾ.ಪಂ.ಯಲ್ಲಿನ ಸಕಾಲ ಯೋಜನಾ ಕೇಂದ್ರಕ್ಕೆ ಸಚಿವರು ಭೇಟಿ ನೀಡಿ ಸಾರ್ವಜನಿಕರ ಸೇವೆ ಒದಗಿಸುತ್ತಿರುವ ಸಂಬಂಧ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭೂ ದಾಖಲೆಗಳ ಸಂರಕ್ಷಣೆ, ಸಕಾಲ ಯೋಜನೆ ಸೇರಿದಂತೆ ಹಲವು ಕಂದಾಯ ವಿಚಾರಗಳ ಕುರಿತು ಸಚಿವರಿಗೆ ಮಾಹಿತಿ ಒದಗಿಸಿದರು. ಜಿ.ಪಂ. ಸಿಇಒ ಆನಂದ್‌ಪ್ರಕಾಶ್ ಮೀನಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ತಹಸೀಲ್ದಾರ್ ಮೋಹನ್ ಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ಜಿ.ಪಂ. ಕಾರ್ಯಪಾಲಕ ಇಂಜಿನಿಯರ್ ಜಿ.ಕೆ.ನಾಯಕ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸತೀಶ್ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net