

ರಟ್ಟಿಹಳ್ಳಿ: ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ಮನಸು ಮತ್ತು ದೇಹ ಉತ್ಸಾಹದಿಂದ ಕೂಡಿರುತ್ತದೆ. ಆಯಸ್ಸು ವೃದ್ಧಿಯಾಗುತ್ತದೆ ಎಂದು ಶಿರಗಂಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಮಾಳಗಿ ಹೇಳಿದರು.
ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಅಮೃತ ಸರೋವರ ಕೆರೆಯ ಅಂಗಳದಲ್ಲಿ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಾವೇರಿ ಜಿ.ಪಂ, ರಟ್ಟಿಹಳ್ಳಿ ತಾ.ಪಂ. ಹಾಗೂ ಶಿರಗಂಬಿ ಗ್ರಾ.ಪಂ. ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ ಮಾತನಾಡಿ, ಭಾರತೀಯ ಪರಂಪರೆಯ ಯೋಗವನ್ನು ಇಂದು ವಿಶ್ವಾದ್ಯಂತ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ. ವಿದೇಶಿಗರು ಯೋಗದ ಮಹತ್ವ ಅರಿತುಕೊಂಡು ಯೋಗಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ನಮ್ಮ ಪೂರ್ವಜರು ನೀಡಿದ ಬಹುದೊಡ್ಡ ಕೊಡುಗೆ ಯೋಗವಾಗಿದೆ. ನಾವೆಲ್ಲರೂ ನಿತ್ಯದ ಕೆಲಸದ ಜತೆಗೆ ಯೋಗಾಭ್ಯಾಸ ಮಾಡುವುದು ರೂಢಿಸಿಕೊಳ್ಳೋಣ ಎಂದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾಗರತ್ನ ಮುದ್ದಪ್ಪಳವರ ಯೋಗ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮಗೌಡ ಸೊರಟೂರ, ಕಾರ್ಯದರ್ಶಿ ಅಶ್ವಿನಿ ಮುಗಲಿಶೆಟ್ಟರ್, ಹೂವಪ್ಪ ಆರೀಕಟ್ಟಿ, ಆಶಾ ಮಜ್ಜಿಗೇರ, ಹನುಮಂತಪ್ಪ ಮುದ್ದಣ್ಣನವರ ಇದ್ದರು.