ಬೇಡಿಕೆ ಈಡೇರದಿದ್ದರೆ ಕೇಂದ್ರ ಕಚೇರಿಗಳು ಬಂದ್ ! ; ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಎಚ್ಚರಿಕೆ

pp
Published on

ರಾಮನಗರ : ರೈತ ಮುಖಂಡ ಜಗದೀತ್ ಸಿಂಗ್ ದಲೆವಾಲ ಉಪವಾಸ ಸತ್ಯಾಗ್ರಹ 17ನೇ ದಿನ ಪೂರ್ಣಗೊಳಿಸಿದ್ದು, ಅವರ ಆರೋಗ್ಯದಲ್ಲಿ ಏರು ಪೇರಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ನೇರ ಹೊಣೆಯಾಗಲಿವೆೆ. ಕೂಡಲೇ ರೈತರ ಬೇಡಿಕೆ ಈಡೇರಿಸದಿದ್ದರೆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳನ್ನು ಬಂದ್ ಮಾಡಿಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಪರವಾದ ಹಲವು ಬೇಡಿಕೆ ಈಡೇರಿಸುವಂತೆ ಮುಖಂಡ ಜಗದೀತ್ ಸಿಂಗ್ ದಲೆವಾಲ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅವರು ಉಪವಾಸ ಆರಂಭಿಸಿ 17 ದಿನ ಪೂರ್ಣಗೊಂಡಿದೆ. ಆದರೆ, ಸುಪ್ರೀಂಕೋರ್ಟ್ ಅವರ ಆರೋಗ್ಯದ ಕಾಳಜಿವಹಿಸುವುದು ಹಾಗೂ ರೈತರ ಬೇಡಿಕೆ ಈಡೇರಿಸುವಂತೆ ಸೂಚನೆ ನೀಡಿದೆ. ಆದರೆ, ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಡಿ.23 ರಂದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಭವನದಲ್ಲಿ ವಿಶ್ವ ರೈತ ದಿನವನ್ನು ರೈತರ ಹಬ್ಬದ ರೂಪದಲ್ಲಿ ಆಚರಣೆ ಮಾಡಲಾಗುತ್ತಿದೆ. ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಸಮಾರೋಪದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಪಾಲ್ಗೊಳ್ಳಲಿದ್ದಾರೆ. ಪರಿಸರ ವಿಜ್ಞಾನಿ ಡಾ.ಚಂದ್ರಶೇಖರ್ ಬಿರಾದಾರ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಶಾಂತ ಕುಮಾರ್ ತಿಳಿಸಿದರು.

ಈ ಸಮಾವೇಶದಲ್ಲಿ ಕೃಷಿ ಸಾಲ ನೀತಿ ಬದಲಾವಣೆ, ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ಮಂಜೂರಾತಿ, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್, ಸರ್ಪ್ರೈಸಿ ಕಾಯ್ದೆ ರದ್ದು ಮಾಡುವುದು, ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡುವುದು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ, ಕೃಷಿ ಉಪಕರಣಗಳು ರಸಗೊಬ್ಬರ ಕೀಟನಾಶಕ. ಮೊಸರು ಮಜ್ಜಿಗೆ ಇತರೆ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್‌ಟಿ ಸುಂಕ ರದ್ದು ಮಾಡುವುದು ಸೇರಿ 19 ಬೇಡಿಕೆಗಳನ್ನು ಸರ್ಕಾರದ ಮುಂದೆ ಹಕ್ಕೊತ್ತಾಯ ಮಾಡಲಾಗುವುದು ಎಂದು ತಿಳಿಸಿದರು. ಈ ಸಮಾವೇಶಕ್ಕೆ ಜಿಲ್ಲೆಯಿಂದ ರೈತರು ಸ್ವಯಂ ಪ್ರೇರಿತರಾಗಿ ಬರುವ ಮೂಲಕ ಸರ್ಕಾರ ಕಣ್ಣು ತೆರೆಸುವ ಕೆಲಸ ಮಾಡಲು ಜೈ ಜೋಡಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net