

* ಐವರನ್ನು ಬಲಿಪಡೆದ ಅದೇ ಕಂಪನಿಗೆ ಮತ್ತೆ ನಿರ್ವಹಣೆಯ ಹೊಣೆ
ರಾಮನಗರ
ಐದು ಮಂದಿ ಹೊರ ರಾಜ್ಯದ ಕಾರ್ಮಿಕರನ್ನು ಬಲಿ ಪಡೆದುಕೊಂಡ ತಾಲೂಕಿನ ಬಿಡದಿ ಬಳಿಯ ಬಿಲ್ಲಕೆಂಪನಹಳ್ಳಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ ಸದ್ದಿಲ್ಲದೆ ಕಾರ್ಯಾಚರಣೆ ಆರಂಭಿಸಿದೆ. ವಿಪರ್ಯಾಸವೆಂದರೆ ಘಟನೆ ನಡೆದಾಗ ಯಾವ ಕಂಪನಿ ಕಾರ್ಯಾಚರಣೆ ಉಸ್ತುವಾರಿ ಹೊತ್ತಿತ್ತೋ ಅದೇ ಕಂಪನಿಗೆ ಮತ್ತೆ ಸ್ಥಾವರದ ನಿರ್ವಹಣೆ ಹೊಣೆಯನ್ನು ನೀಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಬೆಂಗಳೂರಿನಲ್ಲಿ ನಿತ್ಯ ಸಂಗ್ರಹವಾಗುವ ಒಣ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸಲುವಾಗಿ, ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ಸ್ಥಾವರ ನಿರ್ಮಿಸಲಾಗಿದೆ. ಹದಿನೈದು ಎಕರೆಯಲ್ಲಿರುವ ಸ್ಥಾವರದ ನಿರ್ವಹಣೆಯನ್ನು ನೋಯ್ಡದ ಐಎಸ್‌ಜಿಇಸಿ ಹೆವಿ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿಗೆ ವಹಿಸಲಾಗಿತ್ತು. ಕಂಪನಿಯು ಎಂಎಸ್ ಆರ್ಬೀಟ್ ಪವರ್ ಸಿಸ್ಟಮ್ ಮೂಲಕ ಸ್ಥಾವರದ ಕಾರ್ಯಾಚರಣೆ ನಡೆಸುತ್ತಿತ್ತು.
ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣ ಪ್ರಮಾಣಪತ್ರ (ಎನ್‌ಒಸಿ) ಪಡೆಯದೆ, ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳದೆ, ಎಸ್‌ಒಪಿ ಪಾಲಿಸದೆ, ತರಬೇತಿ ಇಲ್ಲದ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿದ್ದು ಸೇರಿ ಸ್ಥಾವರದಲ್ಲಿ ಕೈಗೊಳ್ಳಬೇಕಿದ್ದ ಹಲವು ಕ್ರಮಗಳನ್ನು ಕಂಪನಿ ಗಾಳಿಗೆ ತೂರಿತ್ತು. ಬಾಯ್ಲರ್‌ಗೆ ಒಣ ಕಸದ ಜತೆಗೆ ಹಸಿ ಕಸವನ್ನೂ ಸುರಿಯಲಾಗಿತ್ತು.
ಸ್ಥಾವರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. 2025ರ ಜ. 4ರಂದು ಚಿಮಣಿಯಲ್ಲಿ ಕಸ ಕಟ್ಟಿಕೊಂಡಿತ್ತು. ಸ್ಥಳದಲ್ಲಿದ್ದ ಐವರು ಕಾರ್ಮಿಕರು ಸುರಕ್ಷಾ ಪರಿಕರಗಳಿಲ್ಲದೆ ಚಿಮಣಿಯ ಒಂದು ಭಾಗದ ಕಿಟಕಿ ತೆರೆದು ಕಬ್ಬಿಣದ ಕೋಲಿನಿಂದ ಕಟ್ಟಿಕೊಂಡಿದ್ದ ತ್ಯಾಜ್ಯವನ್ನು ಸರಿಸಲು ಮುಂದಾಗಿದ್ದರು. ಈ ವೇಳೆ ಚಿಮಣಿಯಲ್ಲಿದ್ದ ಬಿಸಿ ಬೂದಿ ಮತ್ತು ಅರೆಬರೆ ಬೆಂದು ಸಿಲುಕಿಕೊಂಡಿದ್ದ ತ್ಯಾಜ್ಯವು ಕಾರ್ಮಿಕರ ಮೇಲೆ ಸಿಡಿದಿತ್ತು.
ಘಟನೆಯಲ್ಲಿ ಬಿಹಾರದ ಉಮೇಶ್‌ಕುಮಾರ್ ಸಿಂಗ್, ಸಂಟೂನ್ ಸದಾಯ್, ಅಮಲೇಶ್ ಕುಮಾರ್ ಕಾಮತ್, ಉತ್ತರಪ್ರದೇಶದ ಲಖನ್ ಸಿಂಗ್ ಹಾಗೂ ತರುಣ್ ಕುಮಾರ್ ರಾಯ್ ಅವರಿಗೆ ತೀವ್ರತರವಾದ ಸುಟ್ಟ ಗಾಯಗಳಾಗಿದ್ದವು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಐವರೂ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದರು.
ಘಟನೆ ಕುರಿತು ಬಿಡದಿ ಠಾಣೆ ಪೊಲೀಸರು ಗಾಯಾಳು ಸಂಟೂನ್ ಸದಾಯ್ ನೀಡಿದ್ದ ದೂರಿನ ಮೇರೆಗೆ ಐಎಸ್‌ಜಿಇಸಿ ಕಂಪನಿಯ ವ್ಯವಸ್ಥಾಪಕ (ಕಾರ್ಯಾಚರಣೆ) ಸುಧೀರ್ ಪಾಠಕ್, ಬರ್ಮನ್, ಮೇಲ್ವಿಚಾರಕ ಸಾಗರ್, ಬಾಯ್ಲರ್ ನಿರ್ವಹಣೆ ಮಾಡುವವರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಮಾರನೇಯ ದಿನವೇ ವ್ಯವಸ್ಥಾಪಕ ಪಾಠಕ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಪೊಲೀಸರು ತನಿಖೆ ತೀವ್ರಗೊಳಿಸಲು ಮುಂದಾಗುತ್ತಿದ್ದಂತೆ, ಕೆಪಿಸಿಎಲ್ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಅಂದಿನಿಂದ ಇಲ್ಲಿಯವರೆಗೆ ಪೊಲೀಸ್ ತನಿಖೆಗೂ ಗ್ರಹಣ ಹಿಡಿದಿದೆ.
ಏಪ್ರಿಲ್‌ನಿಂದ ಮತ್ತೆ ಕಾರ್ಯಾರಂಭಿಸಿರುವ ಸ್ಥಾವರದಲ್ಲಿ ನಿತ್ಯ 10 ಮೆ.ವಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದುವರೆಗೆ 23.7359 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ. ಬಿಬಿಎಂಪಿಯಿಂದ ಇದುವರೆಗೆ 76,850 ಮೆಟ್ರಿಕ್ ಟನ್ ತ್ಯಾಜ್ಯ ಸ್ಥಾವರಕ್ಕೆ ಬಂದಿದೆ. ಹಿಂದೆ ದಿನಕ್ಕೆ ಸುಮಾರು 400 ಮೆಟ್ರಿಕ್ ಟನ್ ಬರುತ್ತಿದ್ದ ತ್ಯಾಜ್ಯ ಕಳೆದ 15 ದಿನಗಳಿಂದ 500 ಟನ್‌ಗೆ ಏರಿಕೆಯಾಗಿದೆ. ಹೀಗಾಗಿ ದಿನಕ್ಕೆ 910 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.
5 ಮಂದಿ ಸಾವಿಗೆ ಕಾರಣವಾದ ಅವಘಡಕ್ಕೆ ಸಂಬಂಧಿಸಿದಂತೆ ಬಿಡದಿ ಠಾಣೆ ಪೊಲೀಸರು ದಾಖಲಿಸಿಕೊಂಡಿರುವ ಎ್ಐಆರ್ ಆ‘ರಿಸಿ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಹಾಗೂ ಸ್ವಾಸ್ಥ್ಯ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಘಟನೆಯ ತನಿಖೆ ಜತೆಗೆ ಸಂಬಂ‘ಪಟ್ಟವರ ವಿಚಾರಣೆ ನಡೆಸಿ, 306 ಪುಟಗಳ ಆರೋಪಪಟ್ಟಿ ಸಿದ್ದಪಡಿಸಿ ರಾಮನಗರದ ಜೆಎಂಎ್ಸಿ ನ್ಯಾಯಾಲಯಕ್ಕೆ ಮಾರ್ಚ್ ತಿಂಗಳಲ್ಲಿ ಸಲ್ಲಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.