

ಕೆ.ಸಂಜೀವ ಆರ್ಡಿ
ಬೈಂದೂರು-ವಿರಾಜಪೇಟೆ ಪ್ರಮುಖ ರಾಜ್ಯ ಹೆದ್ದಾರಿ ಸಂಪರ್ಕದ ಅಲ್ಬಾಡಿ-ಮರೂರು ಕ್ರಾಸ್ ಬಳಿ ಮಾರ್ಗದಲ್ಲಿ ಬೃಹತ್ ಗಾತ್ರದ ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆಗೆ ಮಳೆಗಾಲದಲ್ಲಿ ಜಲ್ಲಿ ಮಿಶ್ರಣ ಹಾಕಿ ಮಾಡಿದ್ದ ತೇಪೆ ಕಿತ್ತು ಹೋಗಿ ಮತ್ತೆ ಬೃಹತ್ ಗಾತ್ರದ ಹೊಂಡಗಳು ಬಾಯ್ಬಿಟ್ಟಿವೆ. ಸಂಪೂರ್ಣ ಗುಂಡಿಗಳಿರುವ ರಸ್ತೆಯಲ್ಲಿ ವಾಹನ ಸವಾರರು ಸರ್ಕಸ್ ಮಾಡುತ್ತ ಸಂಚರಿಸುವಂತಾಗಿದೆ.
ರಾಜ್ಯ ಹೆದ್ದಾರಿಯ ಅಲ್ಬಾಡಿ ಮೂಲಕ ಕುಂದಾಪುರ, ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳಲು ಇದೇ ರಸ್ತೆಯನ್ನು ಬಳಸಲಾಗುತ್ತದೆ. ಈ ರಸ್ತೆಯಲ್ಲಿ ನಿತ್ಯವೂ ವಾಹನಗಳ ದಟ್ಟಣೆ ಇರುತ್ತದೆ. ಮಳೆಗಾಲ ಆರಂಭವಾಗಿ ತಿಂಗಳುಗಳೇ ಕಳೆದರೂ ಇಲಾಖೆಯಿಂದ ಸಮರ್ಪಕ ನಿರ್ವಹಣೆಯಿಲ್ಲದೆ ನೀರು ರಸ್ತೆ ಮೇಲೆ ಹರಿದು ಬೃಹತ್ ಗಾತ್ರದ ಹೊಂಡ-ಗುಂಡಿ ನಿರ್ಮಾಣವಾಗಿದೆ.
ಮಳೆ ಬಂದಾಗ ಭಾರಿ ಗಾತ್ರದ ಹೊಂಡ-ಗುಂಡಿಗಳಲ್ಲಿ ಕೆಸರು ಮಿಶ್ರಿತ ನೀರು ತುಂಬಿ ವಾಹನ ಸವಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ನೀರು ತುಂಬಿದ ರಸ್ತೆಯಲ್ಲಿ ಗುಂಡಿಗಳ ಆಳ ತಿಳಿಯದೆ ಅಪಘಾತಕ್ಕೆ ಕಾರಣವಾಗುತ್ತಿದೆ.
ಎದ್ದು ಬಂದ ಜಲ್ಲಿ ಮಿಶ್ರಣದ ತೇಪೆ ಕಾರ್ಯ: ರಾಜ್ಯ ಹೆದ್ದಾರಿ ಸಂಪರ್ಕದ ಅಲ್ಬಾಡಿ ಮರೂರು ಕ್ರಾಸ್ ಬಳಿ ಹೊಂಡ ಗುಂಡಿಗಳಿಗೆ ತಿಂಗಳ ಹಿಂದೆಯಷ್ಟೇ ಜಲ್ಲಿ ಮಿಶ್ರಣ ಹಾಕಿ ಮುಚ್ಚಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ನೀರು ಹರಿಯುವ ಚರಂಡಿ ಮುಚ್ಚಿ ಹೋಗಿವೆ. ಚರಂಡಿಯನ್ನು ದುರಸ್ತಿಗೊಳಿಸದಿರುವ ಕಾರಣ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ.
ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡ-ಗುಂಡಿಗಳಿಂದ ಬಹಳಷ್ಟು ಹದಗೆಟ್ಟಿದ್ದರೂ ದುರಸ್ತಿಗೆ ಯಾವುದೇ ಕ್ರಮ ಕೈಗೊಳ್ಳದಿರುವ ಲೋಕೋಪಯೋಗಿ ಇಲಾಖೆ ವಿರುದ್ಧ ಸ್ಥಳೀಯರು, ವಾಹನ ಚಾಲಕರು ಬೇಸತ್ತಿದ್ದಾರೆ. ಸಮಸ್ಯೆಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸ್ಪಂದಿಸುವ ಅಗತ್ಯವಿದೆ.
ರಾಜ್ಯ ಹೆದ್ದಾರಿ ಸಂಪರ್ಕದ ಅಲ್ಬಾಡಿ ಮರೂರು ಕ್ರಾಸ್ ಸಂಪರ್ಕ ಮಾರ್ಗ ಬಹಳಷ್ಟು ಅಪಾಯಕಾರಿಯಾಗಿದೆ. ರಾಜ್ಯ ಹೆದ್ದಾರಿಯಿಂದ ಮರೂರು ಕ್ರಾಸ್ ಮೂಲಕ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸುತ್ತಿದೆ. ಸಂಬಂಧಪಟ್ಟವರ ನಿರ್ಲಕ್ಷೃಕ್ಕೆ ಸ್ಥಳೀಯರು, ವಾಹನ ಸವಾರರು ಶಾಪ ಹಾಕುತ್ತಿದ್ದಾರೆ.
ಅಲ್ಬಾಡಿ ಮೂಲಕ ಪ್ರಮುಖ ಸ್ಥಳಗಳಿಗೆ ಸಾಗುವ ಮಾರ್ಗದಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಬಾಡಿ-ಮರೂರು ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷೃದಿಂದ ರಸ್ತೆ ದುರಸ್ತಿಯಾಗಿದೆ. ಮಳೆಗಾಲದಲ್ಲಿ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಜಲ್ಲಿ ಸುರಿದು ತೇಪೆ ಹಾಕಿದರೂ ಯಾವುದೇ ಪ್ರಯೋಜನವಿಲ್ಲ. ಹೊಂಡ ಮುಚ್ಚಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು, ವಾಹನ ಸವಾರರು ಆಗ್ರಹಿಸಿದ್ದಾರೆ.
ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿ ಸಂಪರ್ಕದ ಅಲ್ಬಾಡಿ ಮರೂರು ಕ್ರಾಸ್ ಬಳಿ ಮಾರ್ಗದಲ್ಲಿ ನಿರ್ಮಾಣವಾಗಿರುವ ಬೃಹತ್ ಗಾತ್ರದ ಹೊಂಡ-ಗುಂಡಿಗಳಿಂದ ವಾಹನ ಚಾಲಕರು, ಜನರಿಗೆ ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ರಾಮಣ್ಣ ಗೌಡ ಎಮ್,(ಎಇಇ), -ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕುಂದಾಪುರ ಲೋಕೋಪಯೋಗಿ ಇಲಾಖೆ