

ಬಿಡದಿ
ತಾಲೂಕಿನ ಅಬ್ಬನಕುಪ್ಪೆ&ಇಟ್ಟಮಡು ರಸ್ತೆಯನ್ನು ಯುಜಿಡಿ ಕಾಮಗಾರಿಗೆ ಅಗೆದು ವರ್ಷಗಳೇ ಕಳೆದರೂ ಡಾಂಬರೀಕರಣ ಮಾಡದ ಹಿನ್ನೆಲೆಯಲ್ಲಿ ಗುಂಡಿ ಬಿದ್ದು, ವಾಹನಗಳ ಸವಾರರು ಸಂಚಾರ ಮಾಡಲು ಪರಿತಪಿಸುವಂತಾಗಿದೆ.
ಹೌದು... ಪುರಸಭೆ ವ್ಯಾಪ್ತಿಯ 19ನೇ ವಾರ್ಡ್ಗೆ ಒಳಪಡುವ ಅಬ್ಬನಕುಪ್ಪೆಯಿಂದ 21ನೇ ವಾರ್ಡ್ ಇಟ್ಟಮಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದೂವರೆ ವರ್ಷದ ಹಿಂದೆ ಯುಜಿಡಿ ಕಾಮಗಾರಿ ಮಾಡಿ ಪೈಪ್ ಅಳವಡಿಕೆ ಮಾಡಲಾಗಿದೆ. ಎರಡು ಕಿಮೀ ಉದ್ದದ ರಸ್ತೆಯುದ್ದಕ್ಕೂ 20ಕ್ಕೂ ಹೆಚ್ಚು ಮ್ಯಾನ್ಹೋಲ್ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಯುಜಿಡಿ ಗುತ್ತಿಗೆದಾರ ಅಗೆದಿರುವ ರಸ್ತೆಗೆ ಡಾಂಬರ್ ಹಾಕದೆ ಬಿಟ್ಟುಹೋಗಿರುವ ಕಾರಣ ಈಗ ದೊಡ್ಡ ದೊಡ್ಡ ಗುಂಡಿಗಳಾಗಿವೆ.
ರಸ್ತೆಯ ಮಧ್ಯ ಭಾಗ ಸೇರಿ ಅಲ್ಲಲ್ಲಿ ಗುಂಡಿಗಳಿರುವ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆಯು ರಾಮನಹಳ್ಳಿ, ಗೋಪಹಳ್ಳಿ, ಬಿಲ್ಲೆದೊಡ್ಡಿ ಮಾರ್ಗವಾಗಿ ಕೊಳ್ಳಗನಹಳ್ಳಿ ಕಡೆಗೆ, ಹಾಗೆಯೇ ತೊರೆದೊಡ್ಡಿ, ಅಂಗರಹಳ್ಳಿ, ಹೆಗ್ಗಡಗೆರೆ ಮೂಲಕ ಬಿಡದಿ- ಮುದುವಾಡಿ ಮುಖ್ಯರಸ್ತೆ ಸೇರಿ ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಅಬ್ಬನಕುಪ್ಪೆ ಸರ್ಕಲ್ ಮೂಲಕ ಬಿಡದಿ ಕೈಗಾರಿಕಾ ಪ್ರದೇಶಕ್ಕೆ ನೇರವಾಗಿ ಈ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ.
ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಂಚಾರ ಮಾಡುವ ಬೈಕ್ ಸವಾರರು ಗುಂಡಿಗಳನ್ನು ತಪ್ಪಿಸಲು ಸರ್ಕಸ್ ಮಾಡಬೇಕಾಗಿದೆ. ರಾತ್ರಿ ವೇಳೆ ಬೈಕ್ ಸಮೇತ ಬಿದ್ದು ಗಾಯಗೊಂಡಿರುವ ಹಲವು ನಿದರ್ಶನಗಳಿವೆ. ಪ್ರತಿದಿನ ಶಾಲಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಇದೇ ರಸ್ತೆಯಲ್ಲಿ ಸಂಚರಿಸಲಿದ್ದು, ಹಳ್ಳದಿಣ್ಣೆಯಿಂದ ಕೂಡಿದ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಸವಾಲಾಗಿದೆ.
ಯುಜಿಡಿ ಕಾಮಗಾರಿ ಸಲುವಾಗಿ ಇಟ್ಟಮಡು& ಅಬ್ಬನಕುಪ್ಪೆ ರಸ್ತೆ ಅಗೆದು ಕಾಮಗಾರಿ ಮಾಡಿ ವರ್ಷ ಕಳೆದರೂ ಡಾಂಬರೀಕರಣ ಮಾಡುವ ಗೋಜಿಗೆ ಪುರಸಭೆ ಹೋಗಿಲ್ಲ. ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸವಾಲಾಗಿದ್ದು, ಈಗ ಧೂಳು ಹೆಚ್ಚಾಗಿರುವುದರಿಂದ ಸ್ಥಳಿಯರು ಹಾಗೂ ವಾಹನ ಸವಾರರು ಪಡಿಪಾಟಲು ಪಡುವಂತಾಗಿದೆ. > ಪುಟ್ಟಣ್ಣ, ಇಟ್ಟಮಡು ಗ್ರಾಮಸ್ಥಪುರಸಭಾ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿಗೆ ರಸ್ತೆ ಅಗೆಯಲಾಗಿದೆ. ಈಗಾಗಲೇ ಎಲ್ಲ ವಾರ್ಡ್ ವ್ಯಾಪ್ತಿಯಲ್ಲಿರುವ ರಸ್ತೆಗಳಿಗೆ ಡಾಬರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಕಾಮಗಾರಿಗಾಗಿ 1.25 ಕೋಟಿ ರೂ. ಮೀಸಲಿಡಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸಭೆ ಮಾಡಲು ಆಗಿಲ್ಲ. ಮುಂದಿನ ತಿಂಗಳು ಸಭೆ ಕರೆದು ಅನುಮೋದನೆ ನೀಡಿ ಟೆಂಡರ್ ಕರೆದು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತದೆ.ಹರಿಪ್ರಸಾದ್, ಬಿಡದಿ ಪುರಸಭೆ ಅಧ್ಯಕ್ಷ