

> ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳ ರ್ನಿಲಕ್ಷ್ಯಕ್ಕೆ ಸವಾರರ ಆಕ್ರೋಶ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ರಾಮನಗರ - ಕನಕಪುರ ರಾಜ್ಯ ಹೆದ್ದಾರಿ&3ರ ಅಲ್ಲಲ್ಲಿ ಗುಂಡಿಗಳು ಬಿದ್ದು ಪ್ರಯಾಣ ಪ್ರಯಾಸದಾಯಕವಾಗಿದ್ದು, ಹದಗೆಟ್ಟ ಮಾರ್ಗದಲ್ಲಿ ವಾಹನ ಸವಾರರು ಎದ್ದುಬಿದ್ದು ಸಂಚರಿಸುವಂತಾಗಿದೆ.
ರಾಮನಗರ - ಕನಕಪುರ ರಾಜ್ಯ ಹೆದ್ದಾರಿಯು ಅಚ್ಚಲು, ಅಚ್ಚಲುದೊಡ್ಡಿ, ಕೆಪಿ ದೊಡ್ಡಿ - ಮೊಟ್ಟೆದೊಡ್ಡಿ ಗೇಟ್, ಕೆಪಿ ದೊಡ್ಡಿ ಫಾರಂ, ಗೌಡಯ್ಯನದೊಡ್ಡಿ ಕೆರೆ ಏರಿ ತಿರುವು ಮತ್ತು ಗ್ರಾಮದ ಸಮೀಪ, ಅವ್ವೇರಹಳ್ಳಿ ಕೆರೆ ಹತ್ತಿರ ತೀವ್ರ ಹದಗೆಟ್ಟಿದೆ. ಲೋಕೋಪಯೋಗಿ ಇಲಾಖೆ ಆಗಾಗ ಗುಂಡಿ ಮುಚ್ಚಿ ಕೈತೊಳೆದುಕೊಳ್ಳುತ್ತದೇ ವಿನಃ ಶಾಶ್ವತ ಪರಿಹಾರದ ಕ್ರಮವಹಿಸುತ್ತಿಲ್ಲ.
ಪರಿಣಾಮ ಮುಚ್ಚಲ್ಪಟ್ಟ ಗುಂಡಿಗಳು ಮತ್ತೆ ಬಾಯ್ತೆರೆದು, ಅಪಘಾತ ಆಹ್ವಾನಿಸುತ್ತಿವೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ ಸಂಚರಿಸುತ್ತಿದ್ದಾರೆ. ಕೆಲವರು ಬಿದ್ದು ಗಾಯಗೊಂಡರೆ ಇನ್ನು ಕೆಲವರು ಜೀವವನ್ನೂ ತೆತ್ತಿದ್ದಾರೆ. ಈಗ ಮಳೆಗಾಲವಾದ ಕಾರಣ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಮತ್ತಷ್ಟು ಅಪಾಯ ತರುತ್ತಿವೆ.
ಅಪಘಾತ ಹೆಚ್ಚುವ ಮುನ್ನ ಎಚ್ಚೆತ್ತುಕೊಳ್ಳಿ
ರಾಮನಗರ - ಕನಕಪುರ ಹೆದ್ದಾರಿ ತಾಲೂಕು ಕೇಂದ್ರಗಳನ್ನು ಸಂಪರ್ಕಿಸುವುದಲ್ಲದೇ ತಮಿಳುನಾಡಿನಿಂದ ಆಂಧ್ರಪ್ರದೇಶದ ಗಡಿವರೆಗೂ ಸಾಗುತ್ತದೆ. ಹಾಗಾಗಿ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚು. ಅಲ್ಲಲ್ಲಿ ಗುಂಡಿಗಳು ಬಿದ್ದು, ಜಲ್ಲಿಕಲ್ಲುಗಳೂ ಮೇಲೆದ್ದಿದ್ದು, ಅಪಘಾತಗಳ ಸಂಖ್ಯೆ ಹೆಚ್ಚುವ ಮುನ್ನ ಲೋಕೋಪಯೋಗಿ ಇಲಾಖೆ ಕೂಡಲೇ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸವಾರರು ಒತ್ತಾಯಿಸುತ್ತಿದ್ದಾರೆ.
ಸಂಚಾರ ದಟ್ಟಣೆ ಅಧಿಕ
ಕೈಲಾಂಚ - ಕನಕಪುರ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ ರೇಷ್ಮೆ, ತರಕಾರಿ ಮಾರುಕಟ್ಟೆ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳುವವರು, ಪ್ರಸಿದ್ಧ ಪ್ರವಾಸಿ ತಾಣ ಶ್ರೀರೇವಣಸಿದ್ದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ಬಂದು ಹೋಗುವವವರು, ಶಾಲಾ&ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರು ಈ ಮಾರ್ಗದಲ್ಲಿ ಸಂಚರಿಸುವುದು ಹೆಚ್ಚು. ಆದರೆ ರಸ್ತೆ ಅಧ್ವಾನವಾಗಿರುವ ಪರಿಣಾಮ ಪ್ರತಿದಿನ ಒಬ್ಬರಲ್ಲ ಒಬ್ಬರು ಬಿದ್ದು ಗಾಯಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಅಚ್ಚಲು ಬಳಿ ಖಾಸಗಿ ಕಾರ್ಖಾನೆ ಇದ್ದು, ರಾತ್ರಿ ಮತ್ತು ಬೆಳಗಿನ ಪಾಳಿಯಲ್ಲಿ ಕಾರ್ಮಿಕರು ದುಡಿಯುತ್ತಾರೆ. ರಾತ್ರಿ ಪಾಳಿಯ ಕೆಲಸ ನಿರ್ವಹಿಸಿ, ಮನೆಗೆ ಮರಳುವಾಗ ರಸ್ತೆಯ ಗುಂಡಿಗಳು ಕಾಣದೆ ಬಿದ್ದು ಗಾಯಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲಾ ಕೇಂದ್ರ ರಾಮನಗರ, ತಾಲೂಕು ಕೇಂದ್ರಗಳಾದ ಕನಕಪುರ, ಹಾರೋಹಳ್ಳಿ, ಆನೇಕಲ್, ಹೋಬಳಿ ಕೇಂದ್ರಗಳಾದ ಕೈಲಾಂಚ, ಬಿಡದಿ, ಸಾತನೂರು, ಕೋಡಿಹಳ್ಳಿ, ಪ್ರವಾಸಿ ತಾಣಗಳಾದ ರೇವಣಸಿದ್ದೇಶ್ವರ ಬೆಟ್ಟ, ಸಂಗಮ, ಮೇಕೆದಾಟು, ಚಿಕ್ಕತಿರುಪತಿ ಸೇರಿ ಹಲವು ಪ್ರಸಿದ್ಧ ಪ್ರವಾಸಿ ಸ್ಥಳಗಳಿಗೆ ಮತ್ತು ನೂರಾರು ಗ್ರಾಮಗಳಲ್ಲದೇ ನೆರೆ ರಾಜ್ಯ ತಮಿಳುನಾಡಿಗೂ ಈ ಹೆದ್ದಾರಿಯೇ ಪ್ರಮುಖ ಸಂಪರ್ಕ ಮಾರ್ಗವಾಗಿದೆ.
ಕೆ.ಪಿ.ದೊಡ್ಡಿ, ಮೊಟ್ಟೆದೊಡ್ಡಿ ಗೇಟ್ ಮಧ್ಯೆ ರಸ್ತೆಯ ಎರಡೂ ಭಾಗದಲ್ಲಿ ಉಬ್ಬುತಗ್ಗಾಗಿದೆ. ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರವಾಹನ ಸವಾರರು ಅಪಘಾತಕ್ಕೀಡಾಗಿ, ಆಸ್ಪತ್ರೆ ಸೇರಿದ್ದಾರೆ. ವರ್ಷದ ಹಿಂದೆ ಬೈಕ್ ಸವಾರನೊಬ್ಬ ಬಿದ್ದು, ಮೃತಪಟ್ಟ ಪ್ರಕರಣವೂ ದಾಖಲಾಗಿದೆ. ಇದಕ್ಕೆ ಕಾರಣವೇ ರಸ್ತೆ ಉಬ್ಬುತಗ್ಗಾಗಿರುವುದು. ಸದರಿ ಸ್ಥಳದಲ್ಲಿ ದ್ವಿಚಕ್ರವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುತ್ತಿದ್ದಾರೆ ಎನ್ನುತ್ತಾರೆ ಅವ್ವೇರಹಳ್ಳಿ ವಿಜಯಕುಮಾರ್.
ಲೋಕೋಪಯೋಗಿ ಇಲಾಖೆ ಪ್ರತಿವರ್ಷ ಗುಂಡಿ ಮುಚ್ಚುತ್ತದೆ. ಆದರೆ, ಮತ್ತೆ ಮಳೆಯಾದಾಗ ಮಾರ್ಗ ಯಥಾಸ್ಥಿತಿ ತಲುಪುತ್ತದೆ. ಪದೇಪದೆ ಗುಂಡಿ ಬೀಳುವ ಭಾಗದಲ್ಲಿ ವೈಜ್ಞಾನಿಕವಾಗಿ ಮರು ಡಾಂಬರೀಕರಣ ನಡೆಸಿದರೆ ಸಂಚಾರಕ್ಕೆ ಅನುಕೂಲವಾಗುತ್ತದೆ. ಅಪಘಾತ ತಪ್ಪಿ$ಸಿ, ಅಮೂಲ್ಯ ಜೀವ ಉಳಿಸಬಹುದು.
> ಜಿ.ಪಿ.ಗಿರೀಶ್
ಗ್ರಾಪಂ ಸದಸ್ಯ, ಗೌಡಯ್ಯನದೊಡ್ಡಿ
‘ಕೆ.ಪಿ.ದೊಡ್ಡಿ, ಗೌಡಯ್ಯನದೊಡ್ಡಿ, ಅಚ್ಚಲುದೊಡ್ಡಿ ಗ್ರಾಮಗಳ ಬಳಿ ಹೆದ್ದಾರಿ ಸಂಪೂರ್ಣ ಹಾಳಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬರೀ ಗುಂಡಿ ಮುಚ್ಚಿ ನಿರ್ವಹಣೆ ಮಾಡಿದರೆ ಪ್ರಯೋಜನವಿಲ್ಲ. ನೂತನ ರಸ್ತೆ ಆಗಬೇಕೆಂದು ಶಾಸಕ ಇಕ್ಬಾಲ್ ಹುಸೇನ್ಗೆ ಮನವಿ ಸಲ್ಲಿಸಲಾಗಿದೆ. ಸ್ಪಂದಿಸಿದ ಶಾಸಕರು ಸರ್ಕಾರದಿಂದ ಅನುದಾನ ಸಹ ಕೊಡಿಸಿದ್ದು, ಒಂದೆರಡು ವಾರಗಳಲ್ಲಿ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು.> ವಾಸು ಪುಟ್ಟಮಾಸ್ತಿಗೌಡಮುಖಂಡರು, ಕೆ.ಪಿ.ದೊಡ್ಡಿಸುಮಾರು 89 ಲಕ್ಷ ರೂ. ವೆಚ್ಚದಲ್ಲಿ ಅಚ್ಚಲುದೊಡ್ಡಿ, ಕೆ.ಪಿ.ದೊಡ್ಡಿ&ಮೊಟ್ಟೆದೊಡ್ಡಿ ಗೇಟ್, ಗೌಡಯ್ಯನದೊಡ್ಡಿ, ಅವ್ವೇರಹಳ್ಳಿ ಕೆರೆ ಸಮೀಪದ ರಸ್ತೆಗೆ ಡಾಂಬರು ಹಾಕಬೇಕು. ಉಳಿದ ಸ್ಥಳಗಳಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಿ ಸೂಕ್ತವಾಗಿ ನಿರ್ವಹಿಸಲಾಗುವುದು. ರಸ್ತೆ ದುರಸ್ತಿಗೆ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್ ಹಂತದಲ್ಲಿದೆ.> ಎಂ.ಜಿ.ಪಳನಿಸ್ವಾಮಿಸಹಾಯಕ ಕಾರ್ಯಪಾಲಕ ಅಭಿಯಂತಲೋಕೋಪಯೋಗಿ ಇಲಾಖೆ, ರಾಮನಗರ