

ಮಳವಳ್ಳಿ: ವಿಶ್ವದ ಮುಂದುವರಿದ ರಾಷ್ಟ್ರಗಳೊಂದಿಗೆ ಪೈಪೋಟಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಜನಸಂಖ್ಯೆ ನಿಯಂತ್ರಣ ಸಹಕಾರಿಯಾಗಲಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂಜಯ್ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿ ವೇಗವಾಗಿ ಜನಸಂಖ್ಯೆ ಹೆಚಾಗುತ್ತಿದ್ದು, ಇದರಿಂದ ನಮ್ಮ ಮುಂದಿನ ಪೀಳಿಗೆ ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ಬಂದೊದಗುತ್ತದೆ. ಆದ್ದರಿಂದ ನಾಗರಿಕ ಸಮಾಜದಲ್ಲಿ ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಪ್ರಜ್ಞಾವಂತರಾಗಬೇಕಿದೆ. ದಾಂಪತ್ಯ ಜೀವನದಲ್ಲಿ ಮಕ್ಕಳನ್ನು ಪಡೆಯುವುದು ಆಯ್ಕೆಯಾಗಿರಬೇಕೇ ಹೊರತು, ಅನಿವಾರ್ಯವಾಗಿರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಸ್ತುತ ವಿಶ್ವ ಮಟ್ಟದಲ್ಲಿ ಭಾರತ ದೇಶ ಜನಸಂಖ್ಯೆಯಿಂದ ಅಗ್ರಸ್ಥಾನದಲ್ಲಿದ್ದು, ಇದೇ ರೀತಿ ಮುಂದುವರಿದರೆ ಮುಂದಿನ ದಿನಮಾನಗಳಲ್ಲಿ ಆಹಾರ, ಉದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ ಕಾರಣ ಜನಸಾಮಾನ್ಯರು ಸಾಂವಿಧಾನಿಕವಾಗಿ ಸರ್ಕಾರ ನಿಗದಿಪಡಿಸಿದ ವಯೋಮಾನದಲ್ಲಿ ವಿವಾಹ ಮಾಡಿಕೊಳ್ಳಬೇಕು. ಜತೆಗೆ ಮಕ್ಕಳ ಸಂಖ್ಯೆಯ ಬಗ್ಗೆಯೂ ಚಿಂತನೆಮಾಡಿ ಜನ್ಮದಾತರಾಗಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಯ ವೈದ್ಯಕೀಯ ಪರಿಕರಗಳನ್ನು ವಿತರಿಸಲಾಯಿತು.
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಡಾ.ರೇಣುಕಾದೇವಿ, ಡಾ.ಜ್ಯೋತಿ, ಡಾ.ಮುರಳಿ, ಡಾ.ಸತೀಶ್, ಡಾ.ನೀತೇಶ್‌ಕುಮಾರ್, ಡಾ.ಅನುಪಮಾ, ಫಾರ್ಮಸಿಸ್ಟ್ ರವಿ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.