

ಸಿರಿಗೆರೆ: ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸಾ ವಿಧಾನಗಳಲ್ಲಿ ಎನ್‌ಎಸ್‌ವಿ ಒಂದು ಸೂಕ್ತ, ಸರಳ ವಿಧಾನವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಹೇಳಿದರು.
ಮುದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎನ್‌ಎಸ್‌ವಿ ಶಸ್ತ್ರ ಚಿಕಿತ್ಸಾ ವಿಧಾನವನ್ನು ಸಾರ್ವಜನಿಕರಿಗೆ ಅರಿವು ಮೂಡಿಸಲು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರುಷರು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. ಕೇವಲ 5ರಿಂದ 10 ನಿಮಿಷದಲ್ಲಿ ಚಿಕಿತ್ಸೆ ಮುಗಿಯಲಿದೆ. ಪುರುಷರು ಇದನ್ನು ಮಾಡಿಸಿಕೊಳ್ಳುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಸಂತಾನ ಶಕ್ತಿ ಹರಣ ಚಿಕಿತ್ಸೆಯನ್ನು ಹೆಣ್ಣುಮಕ್ಕಳೇ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಈಗ ಪುರುಷರು ಕೂಡ ಈ ಚಿಕಿತ್ಸೆ ಮಾಡಿಸಿಕೊಂಡು ಜನಸಂಖ್ಯಾ ನಿಯಂತ್ರಣಕ್ಕೆ ಕೈ ಜೋಡಿಸಬಹುದಾಗಿದೆ.
ಶಸ್ತ್ರ ಚಿಕಿತ್ಸೆ ಗಾಯ ರಹಿತವಾಗಿದ್ದು, ಆಸ್ಪತ್ರೆಯಲ್ಲಿ ಉಳಿಯುವ ಅಗತ್ಯವಿಲ್ಲ. ಚಿಕಿತ್ಸೆ ಬಳಿಕ ಪುರುಷರು 1 ವಾರದ ಬಳಿಕ ಎಲ್ಲ ಕೆಲಸಗಳನ್ನು ನಿರ್ವಹಿಸಬಹುದು ಎಂದರು.
ಹೆಣ್ಣು ಮಕ್ಕಳು ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಂಡರೆ ಮೂರು ತಿಂಗಳುಗಳ ಕಾಲ ಆರೈಕೆ ಮಾಡಬೇಕಾಗುತ್ತದೆ. ಆದರೆ, ಪುರುಷರ ಚಿಕಿತ್ಸೆ ಬಹಳಷ್ಟು ಸುಲಭ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಎನ್.ಎಸ್.ಮಂಜುನಾಥ್, ಶ್ರೀಧರ್, ರಾಮಪ್ಪ, ರೇಣುಕಾ ಸ್ವಾಮಿ, ಕಿರಣ್ ಕುಮಾರ್, ಆಶಾ ಕಾರ್ಯಕರ್ತೆಯರು ಇತರರಿದ್ದರು.