ಧರ್ಮಸ್ಥಳ ಕ್ಷೇತ್ರದಿಂದ ಜನಪರ ಕಾರ್ಯಕ್ರಮ

07M.D.R.1
Published on

ಮದ್ದೂರು: ಸುಮಾರು 800 ವರ್ಷಗಳ ಇತಿಹಾಸವಿರುವ ಧರ್ಮಸ್ಥಳ ಕ್ಷೇತ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಲಕ ಸಮಾಜಮುಖಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳು ಜನಪರವಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಎಂ.ಎ.ಹಾಲಪ್ಪ ಬಣ್ಣಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸ್ಪಂದನ ಆಸ್ಪತ್ರೆ ಮಂಡ್ಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಪ್ಪ ವತಿಯಿಂದ ಶನಿವಾರ ತಾಲೂಕಿನ ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆಗಳ ಅಭಿವೃದ್ಧಿ, ಮದ್ಯವರ್ಜನ ಶಿಬಿರ, ದೇಗುಲಗಳ ಸ್ವಚ್ಛತೆ, ಜೀರ್ಣೋದ್ಧಾರ, ವಿದ್ಯಾರ್ಥಿವೇತನ, ಮನೆಯಿಲ್ಲದವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವು ರೀತಿಯಲ್ಲಿ ಸಮಾಜಕ್ಕೆ ಅನುಕೂಲ ಕಲ್ಪಿಸುತ್ತಿದೆ ಎಂದರು.

ಪ್ರಾಂಶುಪಾಲೆ ಯಶೋದಾ ಮಾತನಾಡಿ, ಶ್ರೀ ಕ್ಷೇತ್ರದಿಂದ ಪೂಜ್ಯರು ಸಮಾಜದಲ್ಲಿ ಸರ್ಕಾರದಿಂದ ಮಾಡಲಾಗದ ಹೆಚ್ಚಿನ ಕಳಕಳಿಯ ಸೇವೆಯನ್ನು ಅನುಷ್ಠಾನ ಮಾಡಿ ಹಳ್ಳಿಯ ಮೂಲೆ ಮೂಲೆಯ ಜನರಿಗೆ ತಲುಪಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಸಾಲದ ವಿಚಾರವಾಗಿ ನಡೆಯುವ ಸಂಸ್ಥೆ ಅಲ್ಲ, ಉಳಿತಾಯದ ಪ್ರೇರಣೆಯೇ ಹಾಗೂ ಮಹಿಳಾ ಸಬಲೀಕರಣ ಯೋಜನೆಯ ಉದ್ದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಕಣ್ಣಿನ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ಅನುಸಾರವಾಗಿ ಇಸಿಜಿ ತಪಾಸಣೆ ನಡೆಸಲಾಯಿತು. ಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಆರಕ್ಷಕ ಉಪನಿರೀಕ್ಷಕರಾದ ಭೀಮಪ್ಪ ಸಿದ್ದಪ್ಪ ಬಾನಸಿ, ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಶಾಂತ್, ಎಎಸ್‌ಐ ಗುರುಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕುಮಾರ್ ಕೊಪ್ಪ, ಸಂಚಾಲಕ ಉಮೇಶ್, ಡಾ.ರಕ್ಷಿತಾ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರೇಣುಕಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕಾಲೇಜು ಸಿಬ್ಬಂದಿ ವರ್ಗ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net