

ಕೊಳ್ಳೇಗಾಲ: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿಯನ್ನು ನಿಷೇಧ ಮಾಡಬೇಕೆಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಕೊಳ್ಳೇಗಾಲ ಟೌನ್ ಘಟಕದ ಪದಾಧಿಕಾರಿಗಳು ಶುಕ್ರವಾರ ನಗರಸಭೆ ವ್ಯವಸ್ಥಾಪಕರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ನಗರಸಭೆ ವ್ಯವಸ್ಥಾಪಕ ಲಿಂಗರಾಜು ಮೂಲಕ ಪೌರಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ಗೌರಿ ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿದ್ದ ಮೂರ್ತಿಗಳನ್ನು ಕೆರೆ, ಕಟ್ಟೆಗಳು ಹಾಗೂ ದೇವಸ್ಥಾನದ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡುವುದ್ದರಿಂದ ನೀರು ಕಲುಷಿತಗೊಳ್ಳುತ್ತದೆ. ಅಲ್ಲಿನ ಜಲಚರಗಳು ಸಾವಿಗೀಡಾಗುತ್ತವೆ. ಆ ನೀರನ್ನು ಕುಡಿಯುವ ಜಾನುವಾರುಗಳಿಗೂ ತೊಂದರೆಯಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಸರ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸರ್ಕಾರದ ಹೊರಡಿಸುವ ಆದೇಶದಂತೆ ಪಿಒಪಿ ಗೌರಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದೆ, ಮಣ್ಣಿನ ಗೌರಿ-ಗಣೇಶ ಮೂರ್ತಿ ಮಾರಾಟ ಮಾಡಲು ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಟೌನ್ ಘಟಕ ಅಧ್ಯಕ್ಷ ಜಗದೀಶ್ ಶಾಸ್ತ್ರೀ, ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್, ಉಪಾಧ್ಯಕ್ಷ ಮಾದೇವಸ್ವಾಮಿ, ಕಾರ್ಯಧ್ಯಕ್ಷ ಮೊಹಮ್ಮದ್ ಅಬ್ಜಲ್(ಅಜ್ಜು) ಇತರಿದ್ದರು.