ಪೂರ್ಣಚಂದ್ರ ತೇಜಸ್ವಿ ಕನ್ನಡದ ಕ್ರಿಯಾಶೀಲ ಬರಹಗಾರರು-ನಾಡೋಜ ಡಾ. ಮಹೇಶ ಜೋಶಿ

Kasapa - Tejasvi programme
Published on

ಬೆಂಗಳೂರು: ಕನ್ನಡದ ಹೊಸ ತಲೆಮಾರಿನ ಲೇಖಕರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಅತೀ ಹೆಚ್ಚು ಕ್ರಿಯಾಶೀಲರಾದವರು. ಕನ್ನಡ ಸಾಹಿತ್ಯ ಲೋಕಕ್ಕೆ ವಿಭಿನ್ನ ಆಯಾಮ ಕಟ್ಟಿಕೊಟ್ಟ ಸೃಜನಶೀಲ ಲೇಖಕ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 85ನೇ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಬಹುಮುಖಿ ಪ್ರತಿಭೆಯ ಅವರ ‘ಮಾಯಾಲೋಕ’ವನ್ನು ಕನ್ನಡಿಗರು ತೇಜಸ್ವಿ ಅವರ ಆಸೆಗಣ್ಣುಗಳಿಂದ ನೋಡುವಂತೆ ಮಾಡಿತ್ತು. ‘ಅಣ್ಣನ ನೆನಪು’ ಕೃತಿಯಲ್ಲಿ ತಮ್ಮ ತಂದೆ ಕುವೆಂಪು ಅವರ ವ್ಯಕ್ತಿತ್ವದ ವಿವಿಧ ಮುಖಗಳ ಅನಾವರಣಗೊಳಿಸುವ ಮೂಲಕ ಕುವೆಂಪು ಅವರ ಜೀವನ ಚರಿತ್ರೆಯನ್ನು ಅಪೂರ್ವವಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಕೃತಿಗಳಿಗೆ ಸಂಧಿರುವ ಪ್ರಶಸ್ತಿಗಳು ಅವರ ಬರಹಕ್ಕೆ ಕಳಶವಿಟ್ಟಂತೆ ಎಂದರು.

ಹಲವು ಬಗೆಯ ಆಸಕ್ತಿಗಳು, ವಿಭಿನ್ನ ಪ್ರಯೋಗಗಳು, ತಲಸ್ಪರ್ಶಿ ಬದುಕಿನ ಶೋಧ, ದಿಟ್ಟ ವೈಚಾರಿಕ ನಿಲುವು ಮತ್ತು ಕಲಾತ್ಮಕ ಆಭಿವ್ಯಕ್ತಿ ಇವೆಲ್ಲ ತೇಜಸ್ವಿಯವರನ್ನು ಅನನ್ಯ ಲೇಖಕರನ್ನಾಗಿ ಮಾಡಿತ್ತು. ಅವರ ಅಭಿವ್ಯಕ್ತಿಯ ಹರಹೂ ವಿಸ್ತಾರವಾಗಿದೆ. ಕಥೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನಗಳು, ಪರಿಸರ, ಶಿಕಾರಿ ಸಂಬಂಧಿತ ಬರಹಗಳು, ಇತಿಹಾಸ, ತತ್ವಜ್ಞಾನ, ಮಾನವಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಹೀಗೆ ಹಲವು ಜ್ಞಾನಶಾಖೆಗಳನ್ನು ಒಳಗೊಳ್ಳುವಂತೆ, ಅವುಗಳ ಸಂಬಂಧದ ಎಳೆಗಳನ್ನು ಹಿಡಿದು ಕೂಡಿಸುವಂತೆ ರಚಿಸಿದ್ದಾರೆ ಎಂದು ತೇಜಸ್ವಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪ್ರಕಟಣಾ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್. ಶ್ರೀಧರಮೂರ್ತಿ, ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ ಮತ್ತು ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net