ಬಡವರು-ನಿರಾಶ್ರಿತರಿಗೆ ಹಕ್ಕುಪತ್ರ ನೀಡಿ

18-DVD-6 (Narasanna)
ನರಸಣ್ಣ
Published on

ದೇವದುರ್ಗ: ತಾಲೂಕಿನ ವಿವಿಧೆಡೆ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡ ಬಡವರು ಹಾಗೂ ನಿರಾಶ್ರಿತರಿಗೆ ತಾಲೂಕು ಆಡಳಿತ ಹಕ್ಕುಪತ್ರ ವಿತರಿಸಬೇಕು ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ತಾಲೂಕಿನ ಮಂಡಲಗುಡ್ಡ, ಹೇರುಂಡಿ, ಬಾಗೂರು ಹಾಗೂ ವೀರಗೋಟ ಗ್ರಾಮದಲ್ಲಿ ಬಡವರು ಸರ್ಕಾರಿ ಜಮೀನಿನಲ್ಲಿ ನಿವೇಶನ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಅಲ್ಲದೆ ಕೆಲವರಿಗೆ ನಿವೇಶನ ನೀಡಲಾಗಿದೆ. ಆದರೆ, ಅಧಿಕಾರಿಗಳು ಅವರಿಗೆ ಹಕ್ಕುಪತ್ರ ನೀಡಿಲ್ಲ. ಇದರಿಂದ ಅಭದ್ರತೆ ಕಾಡುತ್ತಿದೆ ಎಂದು ದೂರಿದರು.

ಬಡವರಿಗೆ ಹಕ್ಕುಪತ್ರ ನೀಡುವಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಗ್ರಾಪಂಯಿಂದ ಅಂಬೇಡ್ಕರ್, ಬಸವ, ಆಶ್ರಯ, ಇಂದಿರಾ, ಅಟಲ್ ವಸತಿ ಯೋಜನೆಯಡಿ ಕೆಲ ಫಲಾನುಭವಿಗಳಿಗೆ ಮನೆ ಮಂಜೂರಾಗಿದೆ. ಆದರೆ, ನಿವೇಶನದ ದಾಖಲೆ ಹಾಗೂ ಹಕ್ಕುಪತ್ರ ಇಲ್ಲದ ಕಾರಣ ಮನೆಕಟ್ಟಿಕೊಳ್ಳಲು ಸಮಸ್ಯೆಯಾಗುತ್ತಿದೆ.

ನಿವೇಶನದ ಹಕ್ಕಪತ್ರಕ್ಕಾಗಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಹಕ್ಕುಪತ್ರ ನೀಡುವಂತೆ ಸರ್ಕಾರ ಆದೇಶ ಮಾಡಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಫಲಾನುಭವಿಗಳು ಹಕ್ಕುಪತ್ರ ಇಲ್ಲದೆ ಪರದಾಡುವ ಸ್ಥಿತಿಯಿದೆ.

ತಾಲೂಕು ಆಡಳಿತ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು. ನಿರಾಶ್ರಿತರಿಗೆ ನಿವೇಶನ ಸಹಿತ ಮನೆ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ತಾಲೂಕು ಆಡಳಿತ ಸೌಧ ಮುಂದೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ಹನುಮಂತ ಗುರಿಕಾರ, ಶಬ್ಬೀರ್ ಜಾಲಹಳ್ಳಿ, ಹನುಮಂತ ಗಾಜಲದಿನ್ನಿ, ಮೌನೇಶ್ ದಾಸರ್, ಮಾನಸಯ್ಯ ನಾಯಕ, ದೇವಣ್ಣ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net