

ಹರೀಶ್ ಬೇಲೂರು ಬೆಂಗಳೂರು
ಇತ್ತೀಚಿನ ವರ್ಷಗಳಲ್ಲಿ ಜನರ ದೇಹಕ್ಕೆ ಗುಣಮಟ್ಟದ ಆಹಾರದ ಬದಲು ಕಲಬೆರಕೆ ಆಹಾರ ಸೇರುತ್ತಿರುವುದು ಕಳವಳ ಉಂಟು ಮಾಡಿದೆ. ಕಾಟನ್ ಕ್ಯಾಂಡಿ, ಗೋಬಿ, ಕಬಾಬ್ಗೆ ಕೃತಕ ಬಣ್ಣ ಬಳಕೆಯನ್ನು ಐದಾರು ತಿಂಗಳಲ್ಲಿ ನಿಷೇಧಿಸಲಾಗಿದೆ. ಇಡ್ಲಿ ತಯಾರಿಕೆಯಲ್ಲಿ ಬಳಸುವ ಪ್ಲಾಸ್ಟಿಕ್ನಲ್ಲೂ ರಾಸಾಯನಿಕ ಅಂಶ ಪತ್ತೆಯಾಗಿರುವುದು ಆತಂಕ ತಂದೊಡ್ಡಿದ್ದು, ಆಹಾರ ತಯಾರಿಕೆಯಲ್ಲಿನ ಅಸುರಕ್ಷತೆ ಎಲ್ಲರ ಚಿಂತೆಗೆ ಕಾರಣವಾಗಿದೆ.
ಅಧ್ಯಯನವೊಂದರ ಪ್ರಕಾರ, ಎಣ್ಣೆಯಿಂದ ತಯಾರಿಸಿದ ಪದಾರ್ಥಗಳ ಸೇವನೆಯಿಂದ ಐವರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬೊಜ್ಜಿನ ಬಗ್ಗೆ ಪ್ರಸ್ತಾಪಿಸಿ, ಎಣ್ಣೆಯ ಸೇವನೆಯನ್ನು ಶೇ. 10ರಷ್ಟು ಕಡಿಮೆ ಮಾಡುವಂತೆ ಕರೆ ಕೊಟ್ಟಿದ್ದರು. ಕಲಬೆರಕೆ ಆಹಾರ ಸೇವನೆಯಿಂದ ಅಲ್ಜೆ ೃಮರ್, ಪಾರ್ಕಿನ್ಸನ್, ಹೃದಯಾಘಾತ, ಕ್ಯಾನ್ಸರ್, ಕಿಡ್ನಿ, ಉದರಬೇನೆ, ಮಿದುಳು, ಶ್ವಾಸಕೋಶ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಮುಂತಾದ ಗಂಭೀರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.
ಕಳೆದ ವರ್ಷ 14,200 ವಿವಿಧ ಆಹಾರ ಮಾದರಿಗಳನ್ನು ಪರೀಸಲಾಗಿದ್ದು, ಇದರಲ್ಲಿ 150 ಅಸುರತ, 80 ಕಳಪೆ ಗುಣಮಟ್ಟದ ಅಂಶ ಪತ್ತೆಯಾಗಿದೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಳಪೆ ಆಹಾರ ಮಾರಾಟದಲ್ಲಿ ಕರ್ನಾಟಕವೇ 2ನೇ ಸ್ಥಾನದಲ್ಲಿದೆ. ಕಳಪೆ ಗುಣಮಟ್ಟದ ಆಹಾರ ಹಾಗೂ ಕಲಬೆರಕೆ ಆಹಾರ ಮಾರಾಟ ದೃಢಪಟ್ಟ ಹಿನ್ನೆಲೆಯಲ್ಲಿ ಆಹಾರ ಸುರತೆ ಮಾನದಂಡಗಳ ಕಾಯ್ದೆಯನ್ವಯ 2024ರಿಂದ 2025ರ ಮಾರ್ಚ್ 25ರವರೆಗೆ 135 ಸಂಸ್ಥೆಗಳ ನೋಂದಣಿ ಹಾಗೂ ಪರವಾನಗಿಯನ್ನು ರಾಜ್ಯದಲ್ಲಿ ರದ್ದುಪಡಿಸಲಾಗಿದೆ.
6 ಲಕ್ಷಕ್ಕೂ ಅಧಿಕ ಆಹಾರ ಉದ್ದಿಮೆಗಳಿಗೆ ರಾಜ್ಯದಲ್ಲಿ ಪರವಾನಗಿ ನೀಡಲಾಗಿದೆ. ಅಂದಾಜು 14 ಲಕ್ಷ ಆಹಾರ ಉದ್ದಿಮೆಗಳು ನೋಂದಣಿ ಮಾಡಿಕೊಂಡಿವೆ. ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ಒದಗಿಸುವುದು ಆಹಾರ ಉದ್ದಿಮೆಗಳ ಕರ್ತವ್ಯ. ಆದರೆ, ಬಹುತೇಕ ಹೋಟೆಲ್ಗಳು, ರಸ್ತೆಬದಿ ಮಾರಾಟಗಾರರು ರುಚಿ ಮತ್ತು ಬಣ್ಣವನ್ನು ಆಕರ್ಷಕವಾಗಿಸಲು ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿವೆ.
ಯಾವ್ಯಾವ ಆಹಾರ?
ಹಣ್ಣು, ತರಕಾರಿ ಆಕರ್ಷಕವಾಗಿ ಕಾಣಲು ರಾಸಾಯನಿಕ ಬಳಸಲಾಗುತ್ತ್ತಿದೆ. ಹೆಚ್ಚಾಗಿ ಬೆಣ್ಣೆ, ತುಪ್ಪ, ಹಾಲು, ಮೀನು,ಅಡುಗೆ ಎಣ್ಣೆ ಸೇರಿ ಇತರೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಅಂಶವನ್ನು ಆಹಾರ ಇಲಾಖೆ ಪತ್ತೆ ಹಚ್ಚಿದೆ. ಹೋಂಮೇಡ್ ಚಾಕಲೇಟ್, ಮಾಂಸ, ಕೋಳಿ ಉತ್ಪನ್ನ, ಹಣ್ಣು, ತರಕಾರಿ, ಸಿರಿಧಾನ್ಯ, ಜಾಮ್, ಜೆಲ್ಲಿ, ಖಾದ್ಯ ಎಣ್ಣೆ, ಜೇನುತುಪ್ಪ, ಬೆಲ್ಲ, ಕಾಫಿ, ಟೀ ಪುಡಿ, ಮೆಣಸಿನಕಾಯಿ ಪುಡಿ, ಮಸಾಲೆ ಪದಾರ್ಥ, ದ್ವಿದಳ ಧಾನ್ಯ, ಬೇಕರಿ ಉತ್ಪನ್ನ, ಸಿಹಿ ತಿಂಡಿ, ಪಾನೀಯ, ಸಂಸ್ಕರಿಸಿದ ಆಹಾರ ಮುಂತಾದವುಗಳಲ್ಲಿಯೂ ಕಲಬೆರಕೆ ಅಂಶಗಳು ಪತ್ತೆಯಾಗಿವೆ.
ಪ್ರಮಾಣಪತ್ರ ಕಡ್ಡಾಯ
ಹೋಟೆಲ್ಗಳಲ್ಲಿ ಗುಣಮಟ್ಟ ಆಹಾರ ಲಭ್ಯತೆ ಉದ್ದೇಶದಿಂದ ರಾಜ್ಯದ ಎಲ್ಲ ಹೋಟೆಲ್, ಬೇಕರಿ, ಆನ್ಲೈನ್ನಲ್ಲಿ ಫುಡ್ ಡೆಲಿವರಿ ಕಂಪನಿಗಳು ಹಾಗೂ ಪಿಜ್ಜಾ, ರ್ಬಗರ್ ಮಳಿಗೆಗಳು ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ (ಫೋಸ್ಟಾಕ್) ಪತ್ರ ಪಡೆಯುವುದು 2006ರಿಂದ ಕಡ್ಡಾಯವಾಗಿದೆ. ರಸ್ತೆ ಬದಿ ಹೋಟೆಲ್ ನಡೆಸುತ್ತಿರುವವರು ಸೇರಿ ಎಲ್ಲ ಬಗೆಯ ಹೋಟೆಲ್ ಮಾಲೀಕರು ಕಡ್ಡಾಯವಾಗಿ ಫೋಸ್ಟಾಕ್ ಪತ್ರ ಪಡೆಯಬೇಕು. ಕಾರ್ಮಿಕರು ಕಡ್ಡಾಯವಾಗಿ ತರಬೇತಿ ಪಡೆಯಬೇಕು. ಪರವಾನಗಿ ನೀಡುವಾಗ, ನೋಂದಣಿ ಮಾಡಿಕೊಳ್ಳುವಾಗ, ಫೋಸ್ಟಾಕ್ ಪ್ರಮಾಣ ಪತ್ರವನ್ನು ಅಗತ್ಯ ದಾಖಲೆ ಎಂದು ಪರಿಗಣಿಸಲಾಗುತ್ತದೆ.
* ಕಾಯ್ದೆ ಹೇಳೋದೇನು?
& ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯು 2011ರ ಆ.5ರಿಂದ ಜಾರಿಗೆ ಬಂದಿದೆ
& ಮಾರಾಟಗಾರರು ಕಾಯ್ದೆ ನಿಯಮಗಳ ಪಾಲನೆ ಮಾಡುವುದು ಕಡ್ಡಾಯ
& ಆಹಾರ ಪದಾರ್ಥಗಳಿಗೆ ವೈಜ್ಞಾನಿಕ ಗುಣಮಟ್ಟ ನಿಗದಿ
& ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟ ಹಂತಗಳಲ್ಲಿ ಸುರಕ್ಷತೆ ಕಾಪಾಡುವುದು ಕಡ್ಡಾಯ
& ಉತ್ಪಾದನೆಯಿಂದ ಸೇವಿಸುವವರೆಗೆ ಆಹಾರ ಸುರಕ್ಷತೆ ಬಗ್ಗೆ ಅರಿವು
& ಆಹಾರ ನೈಸರ್ಗಿಕವಾಗಿರಬೇಕು, ರಾಸಾಯನಿಕ, ಕಲಬೆರಕೆಯಿಂದ ಮುಕ್ತವಾಗಿರಬೇಕು
& ತಯಾರಿಕಾ ಕಂಪನಿಗಳು ನಿಗದಿತ ಮಾನದಂಡ ಅನುಸರಿಸಬೇಕು
* ತಪ್ಪಿತಸ್ಥರಿಗೆ 7 ವರ್ಷ ಶಿಕ್ಷೆ
ಆಹಾರ ಪದಾರ್ಥದಲ್ಲಿ ಕಲಬೆರಕೆ ಸಾಬೀತಾದರೆ 25 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ದಂಡ ಹಾಗೂ 2 ತಿಂಗಳಿಂದ 7ವರ್ಷದವರೆಗೆ ಜೈಲು ಶಿಕ್ಷೆ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಕೊರತೆ ಇರುವುದರಿಂದ ನಿಯಮಿತ ತಪಾಸಣೆ ನಡೆಯುತ್ತಿಲ್ಲ. ಕೆಲವೆಡೆ ದಂಡ ವಿಧಿಸಿ ಪ್ರಕರಣ ಕೈಬಿಡಲಾಗುತ್ತಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ.
ಅವಧಿ ಸ್ಯಾಂಪಲ್ ಅಸುರಕ್ಷಿತ ಕಳಪೆ ಗುಣಮಟ್ಟ
2023-24 6000 140 37
2024ರ ಅ.2ರವರೆಗೆ 14,200 150 80
* ಸಹಾಯವಾಣಿ
ಕಳಪೆ ಅಥವಾ ಕಲಬೆರಕೆಯುಕ್ತ ಆಹಾರ, ಅಶುಚಿಯ ವಾತಾವರಣ ಕಂಡುಬಂದಲ್ಲಿ ಸಹಾಯವಾಣಿ 1800112100ಕ್ಕೆ ದೂರು ನೀಡಬಹುದು.