

ಮದ್ದೂರು: ವಿಜಯದಶಮಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಹಲವಾರು ಪೂಜಾ ವಿಧಿವಿಧಾನಗಳು ಮಂಗಳವಾರ ಬೆಳಗ್ಗಿನಿಂದ ಸಂಜೆಯವರೆಗೂ ನೆರವೇರಿದವು.
ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯ, ಹಳೇ ಬಸ್ ನಿಲ್ದಾಣದ ಕಾಶಿವಿಶ್ವೇಶ್ವರ ವಿಶಾಲಾಕ್ಷಿ ದೇವಾಲಯ, ತಾಲೂಕಿನ ಚಿಕ್ಕಅಂಕನಹಳ್ಳಿ ನಂದಿ ಬಸವೇಶ್ವರ, ಆಲೂರು ಬೀರೇಶ್ವರ, ವೈದ್ಯನಾಥಪುರದ ಶ್ರೀ ವೈದ್ಯನಾಥೇಶ್ವರ ಪ್ರಸನ್ನ ಪಾರ್ವತಾಂಬ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ನೆರವೇರಿದವು.
ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ವಿಜಯದಶಮಿ ಪ್ರಯುಕ್ತ ಸೋಮವಾರ ಸಂಜೆ ಬನ್ನಿವೃಕ್ಷ ಛೇದನದ ಮೂಲಕ ಶಮಿ ಪೂಜೆಯನ್ನು ಭಕ್ತಿ-ಭಾವದಿಂದ ನೆರವೇರಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಷಣ್ಮುಗಂ ಸುಂದರಂ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಗ್ರಾಮದ ಶ್ರೀವೈದ್ಯನಾಥೇಶ್ವರ ಮತ್ತು ಪ್ರಸನ್ನ ಪಾರ್ವತಾಂಬ ಮೂರ್ತಿಗಳನ್ನು ಬನ್ನಿವೃಕ್ಷ ಮಂಟಪಕ್ಕೆ ವಾದ್ಯ, ತಮಟೆ, ನಗಾರಿ ಸದ್ದಿನೊಡನೆ ಕರೆತರಲಾಯಿತು.
ಸೋಮವಾರ ಬೆಳಗ್ಗೆಯಿಂದಲೇ ನವಗ್ರಹ ಪೂಜೆ, ಹೋಮ ಹವನ, ಅಭಿಷೇಕ, ವಿಶೇಷ ಅಲಂಕಾರ ಇನ್ನಿತರ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದ ಬಳಿಕ ಗ್ರಾಮದ ಮುತ್ತೈದೆಯರು ಪೂಜೆ ನೆರವೇರಿಸಿ ಶಮಿ ಪೂಜೆ ಕೈಗೊಂಡರು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಳ್ಳಲಾಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಶ್ರೀ ಪ್ರಸನ್ನ ಪಾರ್ವತಾಂಬ ಟ್ರಸ್ಟ್ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.