

ಮೂಡುಬಿದಿರೆ: ಸ್ಥಳೀಯ ವಸತಿ ಸಮುಚ್ಚಯಗಳ ಕಲುಷಿತ ನೀರನ್ನು ನೇರವಾಗಿ ತೋಡಿಗೆ ಬಿಡಲಾಗುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಪುರಸಭೆ ಆರೋಗ್ಯಾಧಿಕಾರಿಗಳು ಗುರುವಾರ ಸ್ಥಳ ಪರಿಶೀಲಿಸಿದರು.
ಪುರಸಭೆ ವ್ಯಾಪ್ತಿಯ ಪೊನ್ನೆಚ್ಚಾರಿ ಸೇತುವೆ ಬಳಿ ಐದು ವಸತಿ ಸಮುಚ್ಚಯಗಳಿದ್ದು, ಇಲ್ಲಿನ ಬಹುತೇಕ ಸಮುಚ್ಚಯದಿಂದ ಕಲುಷಿತ ನೀರು ತೋಡಿಗೆ ಬಿಡಲಾಗುತ್ತಿದೆ. ಇದರಿಂದ ಪುರಸಭೆಯ ಕೊಳವೆ ಬಾವಿ, ಸುತ್ತಮುತ್ತಲಿನ ಮನೆಗಳ ಮೂರು ಬಾವಿಗಳ ನೀರು ಕಲುಷಿತಗೊಂಡಿದ್ದು, ಉಪಯೋಗಕ್ಕೆ ಯೋಗ್ಯವಾಗಿಲ್ಲ. ಈ ಹಿಂದೆ ಸಂಬಂಧಪಟ್ಟವರಿಗೆ ಹಲವು ವರ್ಷಗಳಿಂದ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪರಿಶೀಲನೆ ಬಳಿಕ ಮಾತನಾಡಿದ ಆರೋಗ್ಯಾಧಿಕಾರಿ ಶಶಿರೇಖಾ, ಸ್ಥಳೀಯರ ದೂರಿನಂತೆ ಸ್ಥಳ ಪರಿಶೀಲನೆ ವಾಡಿದ್ದೇವೆ. ಒಂದು ವಸತಿ ಸಮುಚ್ಚಯದವರು ಫಿಲ್ಟರ್ ವಾಡಿ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಅದರ ವರದಿ ಬರುವವರೆಗೆ ನೀರನ್ನು ತೋಡಿಗೆ ಬಿಡದಂತೆ ಸೂಚಿಸಿದ್ದೇನೆ. ತೋಡಿಗೆ ಕಲುಷಿತ ನೀರು ಬಿಡುತ್ತಿರುವ ಇತರ ವಸತಿ ಸಮುಚ್ಚಯಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.