

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ರಣಜಿ ಕ್ರಿಕೆಟ್ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಫೈನಲ್ಗೇರಿದ ಕೇರಳದ ತಂಡವನ್ನು ಪ್ರತಿನಿಧಿಸಿರುವ ಕಾಸರಗೋಡಿನ ಪ್ರತಿಭೆ ಮೊಹಮ್ಮದ್ ಅಜರುದ್ದೀನ್ ಅವರನ್ನು ಕಾಸರಗೋಡಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹುಟ್ಟೂರು ಕಾಸರಗೋಡಿನ ತಳಂಗರೆಗೆ ಆಗಮಿಸಿದ ಮಹಮ್ಮದ್ ಅಜರುದ್ದೀನ್ ಅವರನ್ನು ಅಭಿಮಾನಿಗಳು ಮೆರವಣಿಗೆಯಲ್ಲಿ ಕರೆದೊಯ್ದರು. ಕಾಸರಗೋಡು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ನೇತೃತ್ವದಲ್ಲಿ ಅಜರುದ್ದೀನ್ಗೆ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು.
ಮಹಮ್ಮದ್ ಅಜರುದ್ದೀನ್ ಪತ್ರಕರ್ತರ ಜತೆ ಮಾತನಾಡಿ, ಕೇರಳ ಕ್ರಿಕೆಟ್ ತಂಡ ದೇಶದ ಯಾವುದೇ ತಂಡದ ಜತೆಗೆ ಸ್ಪರ್ಧಿಸಿ, ಪೈಪೋಟಿ ನೀಡಿ ಗೆಲ್ಲುವ ಮಟ್ಟಕ್ಕೆ ತಲುಪಿದೆ. ಕೇರಳ ತಂಡವನ್ನು ಭಾರತೀಯ ಕ್ರಿಕೆಟ್ನಲ್ಲಿ ಯಾರಿಗೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಮುಂಬರುವ ಐಪಿಎಲ್ ತಂಡಕ್ಕೆ ಅರ್ಹರಾದ ಅನೇಕರು ಕೇರಳ ತಂಡದಲ್ಲಿದ್ದಾರೆ. ರಣಜಿ ಫೈನಲ್ನಲ್ಲಿ ಸೋತಿರಬಹುದು, ಆದರೆ ಮೊದಲ ಬಾರಿಗೆ ಕೇರಳ ತಂಡ ಯಾವುದೇ ಪಂದ್ಯದಲ್ಲಿ ಸೋಲದೆ ಫೈನಲ್ಗೇರುವ ಮೂಲಕ ಸಾಧನೆ ತೋರಿದೆ. ಮುಂದೆ ಫೈನಲ್ ಗೆದ್ದು, ಭಾರತೀಯ ಕ್ರಿಕೆಟ್ನಲ್ಲಿ ಕೇರಳ ನಿರ್ಣಾಯಕವಾಗಲಿದೆ ಎಂದರು.
ಜೂನಿಯರ್ ಅಜರುದ್ದೀನ್
ಕಾಸರಗೋಡಿನ ಜೂನಿಯರ್ ತಂಡದ ಕ್ರಿಕೆಟ್ ಪ್ರತಿಭೆಯಾಗಿ ಬೆಳೆದ ಮೊಹಮ್ಮದ್ ಅಜರುದ್ದೀನ್ ಕುಟುಂಬ ಕ್ರಿಕೆಟನ್ನು ನೆಚ್ಚಿಕೊಂಡಿದೆ. 1995ರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಅಜರುದ್ದೀನ್ ಮೇಲಿನ ಪ್ರೀತಿಯಿಂದ ಅವರದೇ ಹೆಸರು ಇರಿಸಲಾಗಿದ್ದು, ಕಾಸರಗೋಡಿನ ಜೂನಿಯರ್ ಮೊಹಮ್ಮದ್ ಅಜರುದ್ದೀನ್ ಆಗಿದ್ದಾರೆ. ಅಜರುದ್ದೀನ್ ಅವರ ಅದೇ ಹಾದಿಯಲ್ಲಿ ಕ್ಲಾಸಿಕ್ ಬ್ಯಾಟರ್ ಸಹಿತ ವಿಕೆಟ್ ಕೀಪರ್ ಆಗಿ ಕೇರಳವನ್ನು ಪ್ರಥಮ ಬಾರಿಗೆ ಫೈನಲ್ಗೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.