

ಮಾಗಡಿ: ಪಟ್ಟಣದ ಚನ್ನಪ್ಪ ಬಡಾವಣೆ, ಕೋಟಪ್ಪನಪಾಳ್ಯ, ಬೈಚಾಪುರ, ಕರಗದಹಳ್ಳಿ ವ್ಯಾಪ್ತಿಯ ಮಳೆ ನೀರು ಮತ್ತು ಶೌಚಗೃಹ ತ್ಯಾಜ್ಯ ನಟರಾಜ ಬಡಾವಣೆಗೆ ನುಗ್ಗಿ ಬಡಾವಣೆ ಕೆರೆಯಂತಾಗಿದೆ.
ಮನೆಗಳಿಗೆ ಈ ಕಲುಷಿತ ನುಗ್ಗಿ ದುರ್ವಾಸನೆ ಬೀರುತ್ತಿದೆ. ಇಡೀ ಬಡಾವಣೆ ವಿಷಜಂತುಗಳು, ಕ್ರಿಮಿ&ಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ಹಗಲಿನಲ್ಲೂ ಸೂರ್ಯನ ಬೆಳಕು ನೋಡದಂತೆ ಬಾಗಿಲು ಮುಚ್ಚಿ ಕತ್ತಲಲ್ಲಿ ವಾಸಿಸುವಂತಾಗಿದೆ. ನಟರಾಜ ಬಡಾವಣೆ ಮಾರ್ಗವಾಗಿ ಶಾಲೆ, ಕಾಲೇಜು, ಪ್ರವಾಸಿ ಮಂದಿರ, ರೇಷ್ಮೆ, ತೋಟಗಾರಿಕೆ ಇಲಾಖೆ ಹಾಗೂ ಶ್ರೀರಂಗನಾಥ ಸ್ವಾಮಿ ದೇವಾಲಯಗಳಿಗೆ ತೆರಳುವ ಸಾವಿರಾರು ಮಂದಿ ಮೂಗುಮುಚ್ಚಿಕೊಂಡೇ ಓಡಾಡಬೇಕಿದೆ.
ಬಡಾವಣೆ ಸ್ಥಿತಿ ಕಂಡು ಬೇಸರಗೊಂಡ ನಿವಾಸಿಗಳು ಬುಧವಾರ ಪುರಸಭೆ ಸದಸ್ಯೆ ನಾಗರತ್ನಮ್ಮ ರಮೇಶ್ ಅವರೊಂದಿಗೆ ಮುಖ್ಯಾಧಿಕಾರಿ ಶ್ರೀನಿವಾಸ್ ಬಳಿ ತೆರಳಿ ಸಮಸ್ಯೆಯನ್ನು ಅರುಹಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಮುಖ್ಯಾಧಿಕಾರಿ ಶ್ರೀನಿವಾಸ್ ಸ್ಥಳ ಪರಿಶೀಲನೆ ನಡೆಸಿ, ಅಲ್ಲಿಯೇ ಇಂಜಿನಿಯರ್ ಮತ್ತು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ಲೋಕೋಪಯೋಗಿ ಇಂಜಿನಿಯರ್ ನಾರಾಯಣ್, ಆರೋಗ್ಯ ನಿರೀಕ್ಷಕ ಶಿವಕುಮಾರ್, ಜಲಗಾರರಾದ ರವಿ, ಸುರೇಶ್, ಗಿರೀಶ್, ರಮೇಶ್, ಮುಖಂಡರಾದ ಕೇಬಲ್ ಮಹೇಶ್, ಸಿದ್ದೇಶ್, ನರಸಿಂಹಮೂರ್ತಿ, ಕರಡಿ ನಾಗರಾಜು, ರುದ್ರೇಶ್, ಗರುಡಪ್ಪ, ನಿವೃತ್ತ ಶಿಕ್ಷಕ ಮಾರಣ್ಣ, ಅಂಗಡಿ ಕುಮಾರು, ರಂಗನಾಥ್, ಶೋಭಾ, ಗೌರಮ್ಮ, ಬೋರಮ್ಮ, ನಾಗಮ್ಮ, ನಟರಾಜು, ಮುನಿಯಮ್ಮ, ನಿರ್ಮಲಾ, ಪ್ರಕಾಶ್, ರವಿ ಇತರರು ಇದ್ದರು.
ಕಣ್ವಾನದಿ ಉಗಮ ಸ್ಥಾನಕ್ಕೆ ಕುತ್ತು ಕಣ್ವಾನದಿ ಉಗಮ ಸ್ಥಾನವಾದ ಈ ರಾಜಕಾಲುವೆಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಇಲ್ಲಿ ಹರಿಯುತ್ತಿದ್ದ ಮಳೆನೀರಿನ ಜತೆಗೆ ಶೌಚಗೃಹದ ತ್ಯಾಜ್ಯ ನೀರು ಕೂಡ ರೇಷ್ಮೆ ಇಲಾಖೆ ಬಾವಿಗಳು, ನಾಗರಿಕರ ಖಾಲಿ ನಿವೇಶನ ಹಾಗೂ ಮನೆಗಳ ಪಾಯಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ಮನೆಯ ಪಾಯಗಳಲ್ಲಿ ಬಿರುಕು ಮೂಡಿದ್ದು, ಬದುಕು ದುಸ್ತರವಾಗಿದೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ. ಕಟ್ಟೆ ಮುಚ್ಚಿ ದೇವಾಲಯ ಕಳೆದ 10 ವರ್ಷದ ಹಿಂದೆ ಖಾಸಗಿಯವರು ದೇವಾಲಯ ನಿರ್ಮಾಣಕ್ಕಾಗಿ ಬಡಾವಣೆಯಲ್ಲಿದ್ದ ನೀಲಯ್ಯನ ಕಟ್ಟೆಯನ್ನು ಮುಚ್ಚಿದ್ದು, ಈ ಜಾಗದಲ್ಲಿ ಶೌಚಗೃಹದ ತ್ಯಾಜ್ಯ ಹೊಳೆಯಂತೆ ಹರಿಯುತ್ತಿದೆ. ಇದರಿಂದಾಗಿ ಈ ಸ್ಥಳದ ಬಳಿಯಿರುವ ಕೆಂಪೇಗೌಡ, ವಿದ್ಯಾನಿಧಿ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಕಾಮಗಾರಿಯಿಂದ ಸಮಸ್ಯೆ: ಪಟ್ಟಣದ ಕೆಂಪೇಗೌಡ ವೃತ್ತದಿಂದ ಗಾಂಧಿ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎಲ್ಲೆಂದರಲ್ಲಿ ಅಗೆದಿರುವುದರಿಂದ ಪೈಪುಗಳು ಒಡೆದು ನೀರಿನ ಪೈಪಿನಲ್ಲಿ ಶೌಚಗೃಹದ ಮಲಿನ ನೀರು ಸೇರಿ ಮನೆಗಳಿಗೆ ಸರಬರಾಜಾಗುತ್ತಿದೆ. ಇದರಿಂದ ಪ್ರತಿ ನಿತ್ಯ ಸಂಪ್ಗಳನ್ನು ಸ್ವಚ್ಛಗೊಳಿಸುವುದಲ್ಲದೆ ಸಾವಿರಾರು ರೂ. ನೀಡಿ ನೀರು ತುಂಬಿಸುಕೊಳ್ಳುವಂತಾಗಿದೆ. ಸೇತುವೆ ನಿರ್ಮಿಸಲು ಮಣ್ಣನ್ನು ಅಡ್ಡಗಟ್ಟಿರುವುದರಿಂದ ನೀರು ಮುಂದೆ ಹರಿಯದೆ ನಿಂತು ಹೊಂಡದಂತಾಗಿದೆ.
ನಮ್ಮ ವಾರ್ಡ್ನಲ್ಲಿ ಒಳಚರಂಡಿ ಸಮಸ್ಯೆ ಬಗೆಹರಿಸಲು 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರು ಪ್ರಕ್ರಿಯೆಯಾಗಿತ್ತು. ಶಾಸಕರು ಈ ಅನುದಾನವನ್ನು ವಾಪಸ್ ಪಡೆದು ಬೇರೆ ಕಾಮಗಾರಿಗೆ ಬಳಸಿಕೊಂಡಿದ್ದಾರೆ. ರಾಜಕಾಲುವೆ ಮುಚ್ಚಿರುವುದು ಹಾಗೂ ನೀಲಯ್ಯನ ಕಟ್ಟೆ ಮುಚ್ಚಿ ದೇವಾಲಯ ನಿರ್ಮಿಸುವ ಅಗತ್ಯವಿರಲಿಲ್ಲ. ಶಾಸಕರು 30 ಲಕ್ಷ ರೂ. ವೆಚ್ಚದಲ್ಲಿ ಗಾಂಧಿ ಪ್ರತಿಮೆ ನಿರ್ಮಿಸುವ ಬದಲು ಒಳಚರಂಡಿ ಕಾಮಗಾರಿ ಮಾಡಿಸಿ ಬಡಾವಣೆ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಿ. >ನಾಗರತ್ನಮ್ಮ ರಮೇಶ್ ಪುರಸಭಾ ಸದಸ್ಯೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವರಿಗೆ ನೋಟಿಸ್ ನೀಡಿ ತೆರವುಗೊಳಿಸಲಾಗುವುದು, ನೀಲಯ್ಯನ ಕಟ್ಟೆ ಮುಚ್ಚಿ ದೇವಾಲಯ ನಿರ್ಮಿಸಿರುವ ಬಗ್ಗೆ ದಾಖಲೆ ಪರಿಶೀಲಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು. ಒಳಚರಂಡಿ ತ್ಯಾಜ್ಯದ ನೀರು ತೆರವಿಗೆ ಕ್ರಮ ವಹಿಸಲಾಗಿದೆ. ಅಮೃತ್ ಯೋಜನೆಯಡಿ ಕಾಮಗಾರಿ ನಡೆಯುತ್ತಿರುವುದರಿಂದ ಪೈಪ್ಲೈನ್ ಒಡೆದು ಹಾಕಿರುವುದರಿಂದ ಬಡಾವಣೆಗೆ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಗುತ್ತಿಗೆದಾರರ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು. > ಶ್ರೀನಿವಾಸ್ ಪುರಸಭೆ ಮುಖ್ಯಾಧಿಕಾರಿ