ಕಲುಷಿತಗೊಂಡಿರುವ ಕೆಮ್ಮಣ್ಣು ನಾಲೆ

ಕಲುಷಿತಗೊಂಡಿರುವ ಕೆಮ್ಮಣ್ಣು ನಾಲೆ
Published on

ಎಂ.ಪಿ.ವೆಂಕಟೇಶ್ ಮದ್ದೂರು

ಪಟ್ಟಣದಿಂದ ವೈದ್ಯನಾಥಪುರಕ್ಕೆ ಹೋಗುವ ರಸ್ತೆ ಅಂಬೇಡ್ಕರ್ ಪಾರ್ಕ್ ಸಮೀಪವಿರುವ ಕೆಮ್ಮಣ್ಣು ನಾಲೆಗೆ ಕಿಡಿಗೇಡಿಗಳು ಸತ್ತ ಮೀನಿನ ಮರಿಗಳನ್ನು ತಂದು ಹಾಕಿರುವುದರಿಂದ ಕೆಮ್ಮಣ್ಣು ನಾಲೆ ಕಲುಷಿತವಾಗುವ ಜತೆಗೆ ಸುತ್ತಲಿನ ಪರಿಸರ ಗಬ್ಬೆದ್ದು ನಾರುವಂತಾಗಿದೆ.

ಮೊದಲೇ ಕೆಮ್ಮಣ್ಣು ನಾಲೆಯಲ್ಲಿ ಗಿಡಗಂಟಿಗಳು ಬೆಳೆದುಕೊಂಡು ಅನೈರ್ಮಲ್ಯ ಕಾಡುತ್ತಿದ್ದು, ಇದೀಗ ಸತ್ತ ಮೀನಿನ ಮರಿಗಳನ್ನು ಹಾಕಿರುವುದರಿಂದ ಸುತ್ತಮುತ್ತ ಜನರು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿ 2 ರಿಂದ 3 ಕಿ.ಮೀ. ದೂರ ಕೆಮ್ಮಣ್ಣು ನಾಲೆ ಇದ್ದು, ನೀರು ಸರಾಗವಾಗಿ ಹರಿಯುವಾಗ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನಾಲೆಯಲ್ಲಿ ನೀರು ಹರಿದು ಹೋಗುವ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬರುವುದಿಲ್ಲ. ನೀರಿನ ಪ್ರಮಾಣ ಕಡಿಮೆಯಾದಾಗ ಶೌಚಗೃಹದ ನೀರು, ಒಳಚರಂಡಿ ನೀರು, ಹೋಟೆಲ್‌ಗಳ ತ್ಯಾಜ್ಯ, ಇತರ ಕಲುಷಿತ ನೀರು, ತ್ಯಾಜ್ಯ ನಿಂತಲ್ಲೇ ನಿಂತು ದುರ್ವಾಸನೆ ಬೀರುತ್ತದೆ. ನಾಲೆಯಲ್ಲಿ ಗಿಡಗಂಟಿಗಳು ಬೆಳೆದು ನೀರು ನಿಂತಲ್ಲೇ ನಿಂತು ಸಮಸ್ಯೆ ಉಂಟಾಗುತ್ತಿದೆ.

ಇದರಿಂದ ನಾಲೆಯ ಸಮೀಪ ವಾಸ ಮಾಡುವ ನಿವಾಸಿಗಳು ರೋಗ ರುಜಿನಗಳು ಹರಡುವ ಭೀತಿ ಎದುರಿಸುತ್ತಿದ್ದಾರೆ. ಕೆಮ್ಮಣ್ಣುನಾಲೆ ಪಟ್ಟಣದ ಪೇಟೆಬೀದಿ ಮೂಲಕ ಹಾದು ಹೋಗಿದೆ. ನಾಲೆ ಪಕ್ಕದ ರಸ್ತೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಇವರಿಗೆ ಕೆಮ್ಮಣ್ಣುನಾಲೆಯ ದುರ್ವಾಸನೆ ಸ್ವಾಗತಿಸುವಂತಾಗಿದೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ನಾಲೆ ಸ್ವಚ್ಛಗೊಳಿಸುವ ಕೆಲಸ ನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net