ಚಿಕ್ಕಬಳ್ಳಾಪುರ: ವೃತ್ತಿಪರ ತರಬೇತಿ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ವಿಚಾರದಲ್ಲಿ ಕೀಳು ಮನಸ್ಸಿನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಕಿಡಿಕಾರಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನಿವಾರ ತೆಗೆಸಲು ಸರ್ಕಾರ ಹೇಳಿತ್ತೇ? ಇದರಲ್ಲೂ ಕೀಳು ರಾಜಕಾರಣ ಮಾಡಬೇಕಾದ ಅಗತ್ಯವಿದೆಯೇ? ಸಮರ್ಪಕವಾಗಿ ನೀಟ್ ಪರೀಕ್ಷೆ ನಡೆಸಲು ಯೋಗ್ಯತೆ ಇಲ್ಲದ ಬಿಜೆಪಿಯವರು ಸರ್ಕಾರದ ನಡೆಯನ್ನು ಪ್ರಶ್ನಿಸಲು ಆಗದೇ ಧರ್ಮದ ವಿಚಾರವನ್ನಿಟ್ಟುಕೊಂಡು ಗೊಂದಲ ಸೃಷ್ಟಿಸುವವರಿಗೆ ಏನು ಹೇಳಬೇಕು? ಎಂದು ಪ್ರಶ್ನಿಸಿದ ಅವರು, ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಸಿಇಟಿ ಪರೀಕ್ಷೆಗೆ ಕೃತಕ ಬುದ್ದಿಮತ್ತೆ, ೇಸ್ ರೀಡಿಂಗ್ ದೃಢೀಕರಣ ಸೇರಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಾರದರ್ಶಕತೆ ಕಾಪಾಡಲಾಗಿದೆ. ಅವೈಜ್ಞಾನಿಕ ನಿಲುವುಗಳನ್ನು ಪ್ರದರ್ಶಿಸಿಲ್ಲ. ಹಿಂದಿನವರ ಆಡಳಿತದಲ್ಲಿನ ಪರೀಕ್ಷೆಯ ನಿರ್ವಹಣೆಗಳನ್ನು (ತಾಳಿ ಸರ, ಮೂಗುತಿ ತೆಗೆಸಿರುವುದು) ಎಲ್ಲರೂ ಕಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಈಗಾಗಲೇ ಜನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಮುದಾಯದ ಸಂಘಟನೆಗಳೊಂದಿಗೆ ಚರ್ಚಿಸಿ, ಅವರ ಬೆಂಬಲಕ್ಕಿರುವ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಘಟನೆ ನಡೆದಿದ್ದು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಧರ್ಮದಲ್ಲಿ ಕೀಳು ರಾಜಕಾರಣ ಮಾಡುವುದಿಲ್ಲ. ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಲಾಗಿದೆ ಎಂದರು.