ರಾಜಧಾನಿಯಲ್ಲಿ ರಂಗೇರಿದ ಪಾಲಿಟಿಕ್ಸ್​..!

FB_IMG_1729256280240
Published on

* ಚನ್ನಪಟ್ಟಣ ಚುನಾವಣಾ ಕಾವು

* ಎರಡೂ ಪಕ್ಷಗಳ ನಾಯಕರಿಂದ ಉತ್ತಮ ತಾಲೀಮು

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಘಟಾನುಘಟಿ ರಾಜಕಾರಣಿಗಳ ಪ್ರತಿಷ್ಠೆಯ ಕದನವಾಗಿರುವ ಚನ್ನಪಟ್ಟಣ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆದರೆ, ಸದ್ಯ ಚುನಾವಣಾ ತಾಲೀಮುಗಳು ಕ್ಷೇತ್ರದಿಂದ ಹೊರಗೆ ನಡೆಯುತ್ತಿರುವುದು ವಿಶೇಷ.

ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನದ ಉಪಚುನಾವಣೆಗೆ ಈಗಾಗಲೇ ಮುಹೂರ್ತ ನಿಗದಿಯಾಗಿದೆ. ಈ ಉಪಕದನ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ವಿಧಾನ ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್​ ನಡುವಿನ ಪ್ರತಿಷ್ಠೆಗೆ ಕಾರಣವಾಗಿದೆ. ತವರು ಜಿಲ್ಲೆಯಲ್ಲಿ ಅಸ್ತಿತ್ವ ಹಾಗೂ ಇಮೇಜ್​ ಕಾಪಾಡಿಕೊಳ್ಳಲು ಈ ಮೂವರಿಗೂ ಈ ಚುನಾವಣೆ ಮಹತ್ವದ್ದಾಗಿದೆ. ಯಾವ ಪಕ್ಷದಿಂ ದಲೂ ಅಭ್ಯರ್ಥಿ ಆಯ್ಕೆ ಅಂತಿಮವಾಗದಿದ್ದರೂ, ಚುನಾವಣಾ ತಾಲೀಮು ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಶಸಾಭ್ಯಾಸಗಳು ಕ್ಷೇತ್ರದಿಂದ ಹೊರಗೆ ನಡೆಯುತ್ತಿರುವುದು ಗಮನಾರ್ಹ.

ರಾಜಧಾನಿಯಲ್ಲಿ ಬೊಂಬೆ ಪಾಲಿಟಿಕ್ಸ್​!

ಇದುವರೆಗೂ ಯಾವ ಅಭ್ಯರ್ಥಿ ಆಯ್ಕೆಯೂ ಅಂತಿಮಗೊಂಡಿಲ್ಲ. ಕ್ಷೇತ್ರದ ಯಾವ ಪದ ಕಾರ್ಯಕರ್ತರಿಗೂ ತಮ್ಮ ಉಮೇದುವಾರ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದರ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಬೊಂಬೆನಾಡ ಪಾಲಿಟಿಕ್ಸ್​ ಗರಿಕೆದರಿಕೊಂಡಿದೆ. ಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್​ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಮಾಜಿ ಸಂಸದ ಡಿ.ಕೆ.ಸುರೇಶ್​ ಕ್ಷೇತ್ರ ವಶಪಡಿಸಿಕೊಳ್ಳಲು ರಾಜಧಾನಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಡಿ.ಕೆ.ಸುರೇಶ್​ ಶುಕ್ರವಾರ ಮಾಗಡಿ ಶಾಸಕ ಎಚ್​. ಸಿ. ಬಾಲಕೃಷ್ಣ ಜತೆಗೂಡಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮಳೂರು ಜಿಪಂ ವ್ಯಾಪ್ತಿಯ ಮುಖಂಡರು ಹಾಗೂ ಮಾಗಡಿ ಕ್ಷೇತ್ರದ ಮುಖಂಡರ ಸಭೆ ನಡೆಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಇದಲ್ಲದೇ ಶನಿವಾರವೂ ಬೆಂಗಳೂರಿನ ಆರ್​. ಆರ್​. ನಗರದ ಗ್ಲೋಬಲ್​ ಕಾಲೇಜಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ಮತ್ತು ಡಿ.ಕೆ.ಸುರೇಶ್​ ಕ್ಷೇತ್ರದ ಮುಖಂಡರ ಸರಣಿ ಸಭೆ ಹಮ್ಮಿಕೊಂಡಿದ್ದಾರೆ. ಚುನಾವಣಾ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಐದು ಜಿಪಂ ಹಾಗೂ ನಗರ ವ್ಯಾಪ್ತಿಯ ಪ್ರತ್ಯೇಕ ಸಭೆ ಆಯೋಜಿಸಿದ್ದಾರೆ. ಚುನಾವಣೆ ಹೊತ್ತಿನಲ್ಲೂ ಡಿ.ಕೆ.ಸುರೇಶ್​ ಕ್ಷೇತ್ರದಲ್ಲಿ ಇದುವರೆಗೂ ಕಾಣಿಸಿಕೊಳ್ಳದಿದ್ದರೂ, ಚುನಾವಣೆಗೆ ಸಂಬಂಧಿಸಿದ ರಣವ್ಯೂಹ ರೂಪಿಸಲು ಬೆಂಗಳೂರನ್ನು ಕೇಂದ್ರಸ್ಥಾನ ಮಾಡಿಕೊಂಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಜೋರಾಗಿ ನಡೆಸುತ್ತಿದ್ದಾರೆ.

ಮೈತ್ರಿಯೂ ಹೊರತಲ್ಲ..!

ಕಾಂಗ್ರೆಸ್​ ಅಷ್ಟೇ ಅಲ್ಲದೇ ಮೈತ್ರಿ ಪಕ್ಷದ ಚಟುವಟಿಕೆಗಳೂ ಕ್ಷೇತ್ರದ ಹೊರಗೆ ನಡೆಯುತ್ತಿರುವುದು ವಿಶೇಷ. ಬಿಡದಿಯಲ್ಲಿರುವ ಮಾಜಿ ಸಿಎಂ ಎಚ್​ಡಿಕೆ ತೋಟದ ನಿವಾಸ ಕ್ಷೇತ್ರದ ಚುನಾವಣಾ ಚರ್ಚೆಯ ಕೇಂದ್ರಸ್ಥಾನವಾಗಿದೆ. ಈಗಾಗಲೇ ಹಲವಾರು ಸಭೆಗಳು ಈ ಜಾಗದಲ್ಲಿ ನಡೆದಿರುವುದನ್ನು ಕಾಣಬಹುದು. ಇನ್ನು, ಮೈತ್ರಿ ಪಕ್ಷದ ಪ್ರಬಲ ಟಿಕೆಟ್​ ಅಕಾಂಕ್ಷಿ ಯೋಗೇಶ್ವರ್​ ಸಹ ಬೆಂಗಳೂರಿನಲ್ಲಿ ಬೀಡುಬಿಟ್ಟು ನಾನಾ ತಂತ್ರಗಾರಿಕೆಯಲ್ಲಿ ಮಗ್ನವಾಗಿದ್ದಾರೆ.

ಈ ಕ್ಷೇತ್ರವನ್ನು ತಾನೇ ಉಳಿಸಿಕೊಳ್ಳಲು ಜೆಡಿಎಸ್​ ಮುಂದಾಗಿದ್ದು, ಮೈತ್ರಿ ಪಕ್ಷದ ನಾಯಕ ಯೋಗೇಶ್ವರ್​ ಮನವೊಲಿಸಲು ಸಹ ಬೆಂಗಳೂರಿನಲ್ಲಿಯೇ ಹರಸಾಹಸ ನಡೆಯುತ್ತಿದೆ. ಶುಕ್ರವಾರ ಏಟ್ರಿಯಾ ಹೋಟೆಲ್​ನಲ್ಲಿ ಹಲವಾರು ಜೆಡಿಎಸ್​ ನಾಯಕರು ಯೋಗೇಶ್ವರ್​ ಮನವೊಲಿಸಲು ಹಲವಾರು ಗಂಟೆಗಳ ಸಭೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ. ಒಟ್ಟಾರೆ, ಹಲವಾರು ಕಾರಣಗಳಿಂದ ಚನ್ನಪಟ್ಟಣ ಉಪಕದನ ಹೈ ವೋಲ್ಟೆಜ್​ ಪಡೆದಿದ್ದು, ಚುನಾವಣಾ ತಾಲೀಮುಗಳು ಕ್ಷೇತ್ರದ ಹೊರಗೆ ರಂಗು ಪಡೆಯುತ್ತಿರುವುದು ವಿಶೇಷ.

ನೀತಿಸಂಹಿತೆಯೇ ಕಾರಣ!

ಈಗಾಗಲೇ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಲಿದ್ದು, ಚುನಾವಣಾ ಅಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಸಭೆ ಹಾಗೂ ಸಮಾರಂಭಗಳ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಹೊರಗೆ ಚುನಾವಣಾ ತಂತ್ರಗಳನ್ನು ನಡೆಸಲು ರಾಜಕೀಯ ನಾಯಕರು ಮುಂದಾಗಿದ್ದಾರೆ. ಬೆಂಗಳೂರು ಕ್ಷೇತ್ರಕ್ಕೆ ಸನಿಹದಲ್ಲಿರುವ ಕಾರಣ ರಾಜಧಾನಿ ಕ್ಷೇತ್ರದ ಚುನಾವಣೆಯ ಹಾಟ್​ಸ್ಪಾಟ್​ ಆಗಿ ಬದಲಾಗಿದೆ. ಚುನಾವಣಾ ಆಯೋಗ ಕ್ಷೇತ್ರದ ಹೊರಗೂ ನಿಗಾವಹಿಸಲಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net