

ಸರಗೂರು: ಹಾಲು ಉತ್ಪಾದಕರ ಸಂಘದಲ್ಲಿ ಈವರೆಗೂ ರಾಜಕೀಯ ಬೆರೆಸಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗೂಡಿ ರಾಜಕೀಯ ಮಾಡದೆ ಕೆಲಸ ಮಾಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಸಾಗರೆ ಗ್ರಾಪಂ ವ್ಯಾಪ್ತಿಯ ಸಾಗರೆ ಹೊಸಕಾಲನಿ ಗ್ರಾಮದಲ್ಲಿ ಸೋಮವಾರ ಸಾಗರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಬಿಎಂಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಜನರನ್ನು ಸೇರಿಸಿಕೊಂಡು ಉತ್ತಮವಾಗಿ ಬೆಳೆಸಬೇಕು. ನಾನಾಗಲಿ, ನಮ್ಮ ತಂದೆಯವರಾಗಲಿ, ದಿ.ಧ್ರುವನಾರಾಯಣ ಅವರಾಗಲಿ ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡಿಲ್ಲ. ತಾಲೂಕಿನ ಸಹಕಾರ ಸಂಘಗಳು ಉತ್ತಮವಾಗಿ ಬೆಳೆದಿವೆ. ಇದು ಸಂತಸದ ಸಂಗತಿ ಎಂದರು.
ಬಿಎಂಸಿ ಕೇಂದ್ರಕ್ಕೆ ಸಂಘದಿಂದಲೇ ಹಣ ನೀಡಿರುವುದು ಸಂತಸ. ಈ ಭಾಗದ ಗ್ರಾಮಗಳಾದ ಕಂದೇಗಾಲ, ಆಗತ್ತೂರು, ಗದ್ದೇಹಳ, ಬಿದರಹಳ್ಳಿ ಸುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ. ಸಹಕಾರ ಸಂಘಗಳು ಬೆಳೆದರೆ ರೈತರು ಉತ್ತಮವಾಗಿ ಜೀವನ ನಡೆಸಬಹುದು ಎಂದು ಹೇಳಿದರು.
ಸಾಗರೆ ಮಾರಮ್ಮ ಮತ್ತು ಮಹದೇಶ್ವರ ಸ್ವಾಮಿ ಜಾತ್ರೆ ಬಗ್ಗೆ ಗೊಂದಲ ಆಗಿದೆ. ಅದನ್ನು ಮುಂದಿನ ದಿನದಲ್ಲಿ ಸರಿಪಡಿಸಲಾಗುತ್ತದೆ. ಸಂಪ್ರದಾಯವಾಗಿ ಜಾತ್ರೆ ನಡೆದುಕೊಂಡು ಹೋಗಲು ಮುಂದಿನ ದಿನದಲ್ಲಿ ಸಭೆ ಮಾಡಬೇಕು ಎಂದರು.
ಮೈಮುಲ್ ನಿರ್ದೇಶಕ ಈರೇಗೌಡ ಮಾತನಾಡಿದರು. ಡೇರಿಗೆ ಹೆಚ್ಚು ಹಾಲು ಪೂರೈಸಿದ ಶುಭಮಂಗಳಾ, ರೂಪಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ಕೆಂಪಮ್ಮ, ಮೈಮುಲ್ ನಿರ್ದೇಶಕಿ ದಾಕ್ಷಾಯಿಣಿ ಬಸವರಾಜು, ಸಾಗರೆ ಗ್ರಾಪಂ ಅಧ್ಯಕ್ಷೆ ವಸಂತಮ್ಮ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಹೆಗ್ಗನೂರು ಗ್ರಾಪಂ ಅಧ್ಯಕ್ಷ ಸುಧೀರ್, ಸಾಗರೆ ಗ್ರಾಪಂ ಮಾಜಿ ಅಧ್ಯಕ್ಷ ಸುನೀಲ್, ಶಿವರಾಜು, ಜಯರಾಮ, ಕಾಳಸ್ವಾಮಿ, ಪ್ರಮೋದ್, ವನಸಿರಿ ಉಮೇಶ್, ಸಕಲೇಶ್, ಮಂಜುನಾಥ್, ವಿಸ್ತರಣಾಧಿಕಾರಿ ಆರಿಫ್ ಇಕ್ಬಾಲ್, ಜಯಂತ್ ಕುಮಾರ್, ರಾಮಪ್ಪ ಬಾರ್ಕಿ, ಯೋಗೇಶ್, ಜಗದಾಂಬ, ತಾಹಿರ್ ಗರಗ, ಪಿಡಿಒ ಲೋಕೇಶ್, ಮುಖ್ಯ ಕಾರ್ಯನಿರ್ವಾಹಕ ಮಹೇಶ್ವರಿ ಸಕಲೇಶ್ ಭಾಗವಹಿಸಿದ್ದರು.