ಶಾಲೆ, ದೇವಳದಲ್ಲಿ ರಾಜಕೀಯ ಸಹಿಸಲಾರೆ: ಶಾಸಕ ಅಶೋಕ್ ರೈ ಸ್ಪಷ್ಟನೆ

Ism_Politics
Published on

ಪುತ್ತೂರು ಗ್ರಾಮಾಂಂತರ: ಶಾಲೆಗಳು ಮತ್ತು ದೇವಸ್ಥಾನಗಳಲ್ಲಿ ರಾಜಕೀಯ ಮಾಡಬಾರದು.ಈ ಎರಡು ಕ್ಷೇತ್ರದಲ್ಲಿ ರಾಜಕೀಯ ಮಾಡುವುದನ್ನು ಶಾಸಕನಾಗಿ ನಾನು ಸಹಿಸುವುದೂ ಇಲ್ಲ. ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ರಾಜಕೀಯ ಮಾಡಿ ಮಕ್ಕಳ ಭವಿಷ್ಯ ಹಾಳುಮಾಡಬಾರದು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಕೊಳ್ತಿಗೆ ಗ್ರಾಮದ ಮಣಿಕ್ಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಹಾಗೂ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಪ್ರಮೋದ್ ಕೆ.ಎಸ್, ಸದಸ್ಯರಾದ ಶುಭಲತಾ, ಸುಂದರ, ದಾನಿಗಳಾದ ಸುನೀಲ್, ಜಗನ್ನಾಥ ರೈ, ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್, ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಗಫೂರ್ ಸಾಹೇಬ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ನಳಿನಿ, ಹಾರಾಡಿ ಶಾಲೆಯ ಮುಖ್ಯಶಿಕ್ಷಕ ಕೆ.ಕೆ.ಮಾಸ್ಟರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ ವಂದಿಸಿದರು.

ಮುಖ್ಯಶಿಕ್ಷಕಿ ವಿರುದ್ಧ ಕ್ರಮಕ್ಕೆ ಸೂಚನೆ

ಕೊಠಡಿಯನ್ನು ಮಾಜಿ ಶಾಸಕ ಉದ್ಘಾಟನೆ ಮಾಡಲು ಅವಕಾಶ ನೀಡುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಿರುವ ಶಾಲಾ ಮುಖ್ಯಶಿಕ್ಷಕಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಾಸಕ ಅಶೋಕ್‌ಕುಮಾರ್ ರೈ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾಜಿ ಶಾಸಕರಿಗೆ ಉದ್ಘಾಟನೆ ಮಾಡುವ ಅಧಿಕಾರ ಇಲ್ಲ. ಈ ವಿಚಾರ ಮಾಜಿ ಶಾಸಕರಿಗೆ ಗೊತ್ತಿದ್ದರೂ ಶಿಕ್ಷಕಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದಾರೆ. ಸಂಸದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಥವಾ ಶಾಲೆಯ ಕಾರ್ಯಾಧ್ಯಕ್ಷ ಉದ್ಘಾಟನೆ ಮಾಡಿದ್ದರೆ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿರಲಿಲ್ಲ. ಮುಖ್ಯಶಿಕ್ಷಕಿಯನ್ನು ಅಮಾನತು ಮಾಡುವಂತೆ ಸೂಚನೆ ನೀಡುತ್ತಿದ್ದೆ. ಆದರೆ ಮಾನವೀಯ ನೆಲೆಯಲ್ಲಿ ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್‌ಕುಮಾರ್ ರೈ ತಿಳಿಸಿದರು. ಶಿಕ್ಷಕಿ ಮಾತನಾಡಿ, ಮಾಜಿ ಶಾಸಕರು ಬಂದು ಉದ್ಘಾಟನೆ ಮಾಡಿದ್ದಾರೆ. ನಾನೇನೂ ಮಾಡುವಂತಿರಲಿಲ್ಲ. ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net