ರಾಜಕೀಯ ಶಕ್ತಿ ಕೇಂದ್ರ ತಿಟ್ಟಮಾರನಹಳ್ಳಿ!

20240324_140704
Published on

* ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಹೆಗ್ಗಳಿಕೆ

* ಇತಿಹಾಸದ ಪುಟದಲ್ಲಿ ರಾರಾಜಿಸುವಂತೆ ಮಾಡಿದ ಗಣ್ಯರು

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರಕ್ಕೆ ಹೊಂದಿಕೊಂಡಂತಿರುವ ತಿಟ್ಟಮಾರನಹಳ್ಳಿ, ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಮಹತ್ತರವಾದ ಪಾತ್ರವಹಿಸಿರುವ ಗ್ರಾಮ. ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಹೆಗ್ಗಳಿಕೆ ಗ್ರಾಮಕ್ಕಿದೆ.

ನಗರದಿಂದ ಕೂಗಳತೆ ದೂರದಲ್ಲಿರುವ ತಿಟ್ಟಮಾರನಹಳ್ಳಿ, ತಾಲೂಕಿನ ರಾಜಕಾರಣಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಉತ್ತಮ ನಾಯಕತ್ವ ಗುಣ ಮೈಗೂಡಿಸಿಕೊಂಡು, ತಾಲೂಕಿನಲ್ಲಿ ಸಮರ್ಥ ನಾಯಕತ್ವದೊಂದಿಗೆ ರಾಜಕಾರಣ ಮಾಡಿದ ಹೆಗ್ಗಳಿಕೆಯನ್ನು ಈ ಗ್ರಾಮ ತನ್ನದಾಗಿಸಿಕೊಂಡಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ರಾಜಕಾರಣ ಎರಡರಲ್ಲೂ ಸೈ ಎನಿಸಿಕೊಂಡಿರುವುದು ಈಗ ಇತಿಹಾಸ.

ಐದನೇ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿ! 

ಸಂಸ್ಥಾನದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶ್ರೇಷ್ಠರೆನಿಸಿದ ವಿ.ವೆಂಕಟಪ್ಪ ಅವರ ಸ್ವಗ್ರಾಮ ಇದಾಗಿದ್ದು, ಅವರ ನೇತೃತ್ವದಲ್ಲಿ ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳವಳಿಗೆ ಬಲ ತುಂಬಿದ ಕೀರ್ತಿ ಈ ಗ್ರಾಮಕ್ಕಿದೆ. 1942ರಲ್ಲಿ ಗ್ರಾಮದಲ್ಲಿ ಐದನೇ ಅಖಿಲ ಮೈಸೂರು ಕಾಂಗ್ರೆಸ್ ಅಧಿವೇಶನ ನಡೆದಿದ್ದು, ಈ ಅಧಿವೇಶನ ಚಳವಳಿಗೆ ಒಂದು ಮೈಲಿಗಲ್ಲು.

ಸಾತ್ವಿಕ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ವಿ.ವೆಂಕಟಪ್ಪನವರ ಉಸ್ತುವಾರಿಯಲ್ಲಿ ಗ್ರಾಮದಲ್ಲಿ ಟಿ.ಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ಐದು ದಿನ ಅಧಿವೇಶನ ನಡೆದು, ಹಲವು ಮಹತ್ತರವಾದ ನಿರ್ಣಯ ಕೈಗೊಳ್ಳಲಾಗಿತ್ತು. ಗ್ರಾಮದ ಪಟೇಲ್ ವೆಂಕಟೇಗೌಡ ಹಾಗೂ ಲಿಂಗಮ್ಮನವರ ಪುತ್ರರಾಗಿ 1898ರಲ್ಲಿ ಜನಿಸಿದ ವಿ.ವೆಂಕಟಪ್ಪನವರು ಸ್ವಾತಂತ್ರ್ಯ ಹೋರಾಟ ಹಾಗೂ ರಾಜಕೀಯಕ್ಕೆ ಮಹತ್ತರವಾದ ಕೊಡುಗೆ ನೀಡುವ ಮೂಲಕ ಗ್ರಾಮದ ಹೆಸರನ್ನು ಇತಿಹಾಸದ ಪುಟದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ. ಇವರ ಸ್ಫೂರ್ತಿಯಿಂದ ಗ್ರಾಮದ ಟಿ.ಎಲ್.ಕಾಡಯ್ಯ, ಮುಂಡಿ ಚನ್ನೇಗೌಡ, ಮಾಸ್ಟರ್ ಬೋರಯ್ಯ, ಡಾ.ಟಿ.ವಿ. ವರದಪ್ಪ ಸೇರಿ ಹಲವು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಕೊಡುಗೆ ನೀಡಿದ್ದಾರೆ.

ಮೊದಲ ವಿದ್ಯಾಮಂತ್ರಿ ವಿ.ವೆಂಕಟಪ್ಪ 

ವಿ. ವೆಂಕಟಪ್ಪ ಅವರ ಮಾರ್ಗದಲ್ಲೇ ಸಾಗಿದ ಈ ಗ್ರಾಮ ರಾಜಕೀಯ ಶಕ್ತಿ ಕೇಂದ್ರ ಎಂದರೆ ತಪ್ಪಾಗಲಾರದು. ತಾಲೂಕಿನ ರಾಜಕೀಯದಲ್ಲಂತೂ ಪ್ರಮುಖವಾದ ಹೆಜ್ಜೆ ಗುರುತು ಉಳಿಸಿರುವ ಕೀರ್ತಿ ಜತೆಗೆ ಪ್ರಬಲವಾದ ರಾಜಕಾರಣಿಗಳನ್ನು ಬೆಳೆಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಸ್ವತಃ ವಿ.ವೆಂಕಟಪ್ಪ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿ, ಸ್ಪೀಕರ್ ಆಗಿ, ಸಚಿವರಾಗಿ, ವಿಧಾನ ಪರಿಷತ್ತಿನ ಸಭಾಪತಿಯಾಗಿ ಹೀಗೆ ಹಲವು ಹುದ್ದೆ ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ರಾಜ್ಯದ ಮೊಟ್ಟಮೊದಲ ವಿದ್ಯಾಮಂತ್ರಿ ಇವರು ಎಂಬುದು ವಿಶೇಷ.

ವಿ.ವೆಂಕಟಪ್ಪ ನಂತರ, ಈ ಗ್ರಾಮದ ಹಲವರು ತಾಲೂಕು ರಾಜಕಾರಣದಲ್ಲಿ ಛಾಪು ಮೂಡಿಸಿದ್ದು, ಇವರ ಪುತ್ರ ಟಿ.ವಿ.ಕೃಷ್ಣಪ್ಪ ಈ ಹಿಂದೆ ಎರಡು ಬಾರಿ ಕ್ಷೇತ್ರದ ಶಾಸಕರಾಗಿದ್ದರು. ಇನ್ನೊರ್ವ ಪುತ್ರ ಟಿ.ವಿ.ರಾಮಣ್ಣ ಚನ್ನಪಟ್ಟಣ ಹಾಗೂ ರಾಮನಗರ ಎರಡು ಕ್ಷೇತ್ರದಿಂದಲ್ಲೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಇದರೊಂದಿಗೆ, ಗ್ರಾಮದ ಟಿ.ಪಿ.ಪುಟ್ಟಸಿದ್ದೇಗೌಡ (ಬಿಜೆಪಿಯಿಂದ), ವಿ.ವೆಂಕಟಪ್ಪ ಮೊಮ್ಮಕ್ಕಳಾದ ಟಿ.ಕೆ.ಯೋಗೀಶ್ (ಪಾಪು) ಹಾಗೂ ರಘುನಂದನ್ ರಾಮಣ್ಣ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆ ಎದುರಿಸಿದ್ದಾರೆ. ವಿ.ವೆಂಕಟಪ್ಪ ಕುಟುಂಬದ ಕುಡಿ ರಘುನಂದನ್ ರಾಮಣ್ಣ ಕೆಪಿಎಸ್ಸಿ ಸದಸ್ಯರಾಗಿ ಕಾರ್ಯನಿರ್ವಹಿಸಿ, ಪ್ರಸುತ್ತ ಬಿಎಂಐಸಿಎಪಿಎ ಅಧ್ಯಕ್ಷರಾಗಿದ್ದಾರೆ. ಟಿ.ಕೆ.ಯೋಗೀಶ್ ಪ್ರತಿಷ್ಠಿತ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಕೆಪಿಸಿಸಿ ಸದಸ್ಯರಾಗಿದ್ದಾರೆ.

ಇದಲ್ಲದೇ, ತಾಲೂಕು ಜೆಡಿಎಸ್ ಮತ್ತು ಕಾಂಗ್ರೆಸ್‌ಅನ್ನು ಧೀರ್ಘಕಾಲ ಮುನ್ನಡೆಸಿದ ಹೆಗ್ಗಳಿಕೆ ಈ ಗ್ರಾಮ ಹೊಂದಿದೆ. ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಟಿ.ಪಿ.ಪುಟ್ಟಸಿದ್ದೇಗೌಡ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿ ಟಿ.ವಿ.ಕೃಷ್ಣಪ್ಪ (ಮೊಟ್ ಬಾಂಡ್) ದೀರ್ಘಕಾಲ ಕಾರ್ಯನಿರ್ವಹಿಸಿರುವುದು ಈ ಗ್ರಾಮದ ನಾಯಕತ್ವ ಗುಣಕ್ಕೆ ಸಾಕ್ಷಿ ಎನ್ನಬಹುದು. ಜಿಪಂ ಸದಸ್ಯರಾಗಿ ಟಿಪಿ ಪುಟ್ಟಸಿದ್ದೇಗೌಡ, ತಾಪಂ ಅಧ್ಯಕ್ಷರಾಗಿ ಬಿ. ನಾಗೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿ ಬೊಮ್ಮಿ ಸಿದ್ದೇಗೌಡರು ಹಾಗೂ ಬಿ. ಸಿದ್ದೇಗೌಡ, ಪ್ರತಿಷ್ಠಿತ ಕಸಬಾ ಪಿಎಸಿಎಸ್ ಮಾಜಿ ಅಧ್ಯಕ್ಷರಾಗಿ ಟಿ.ಎಲ್.ರಾಜು ಕಾರ್ಯನಿರ್ವಹಿಸಿದ್ದಾರೆ. ಜತೆಗೆ, ಟಿ.ಕೆಂಪೇಗೌಡ ಎಂಬುವವರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಮಹಿಳೆಯರ ಸಬಲೀಕರಣಕ್ಕೆ ಒತ್ತು

ರಾಜಕೀಯವಷ್ಟೇ ಅಲ್ಲದೇ ಸಹಕಾರ ಹಾಗೂ ವಿವಿಧ ಕ್ಷೇತ್ರದಲ್ಲೂ ಈ ಗ್ರಾಮ ಛಾಪು ಮೂಡಿಸಿದ್ದು, ವಿಜಯಲಕ್ಷ್ಮೀ ರಾಮಣ್ಣ ಮಹಿಳೆಯರ ಸಬಲೀಕರಣಕ್ಕೆ ಜಿಲ್ಲೆಯಲ್ಲೇ ಮೊದಲು ಎನ್ನಬಹುದಾದ ಮಹಿಳಾ ಬ್ಯಾಂಕ್ ಸ್ಥಾಪಕರಾಗಿದ್ದಾರೆ. ವಕೀಲರ ಸಂಘದ ಅಧ್ಯಕ್ಷರಾಗಿ ಟಿ.ವಿ.ಗಿರೀಶ್ ಎರಡು ಬಾರಿ ಆಯ್ಕೆಯಾಗಿದ್ದಾರೆ. ಕಸಾಪದ ಮೊದಲ ತಾಲೂಕು ಅಧ್ಯಕ್ಷ ಸಿದ್ದೇಗೌಡ (ಗುರುರಾಜಣ್ಣ) ಸಹ ಇದೇ ಗ್ರಾಮದವರು. ಪ್ರಸುತ್ತ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಟಿ.ಪಿ.ಹನುಮಂತಯ್ಯ, ಕಸಬಾ ಪಿಎಸಿಎಸ್ ನಿರ್ದೇಶಕರಾಗಿ ಮಾಜಿ ಛೇರ್ಮನ್ ಕೃಷ್ಣೇಗೌಡ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ, ಪ್ರತಿಷ್ಠಿತ ಸ್ಫೋಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ನ ಅಧ್ಯಕ್ಷರಾಗಿ ನಿಂಗೇಗೌಡ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೇ ವೈದ್ಯಕೀಯ ಹಾಗೂ ವಿವಿಧ ಕ್ಷೇತ್ರದಲ್ಲಿ ಗ್ರಾಮದ ಹಲವರು ಸೇವೆ ಸಲ್ಲಿಸುತ್ತಿದ್ದಾರೆ.

ಊರಿಗೊಂದೇ ದೇವಾಲಯ! 

ಗ್ರಾಮ ಎಂದ ಮೇಲೆ ಹಲವು ದೇವಾಲಯಗಳನ್ನು ಕಾಣಬಹುದು. ಆದರೆ, ಈ ಗ್ರಾಮದಲ್ಲಿ ಇರುವುದು ಒಂದೇ ದೇವಾಲಯ. ಗ್ರಾಮದ ಬದಿಯಲ್ಲಿರುವ ಕಣ್ವ ನದಿ ದಡದಲ್ಲಿರುವ ಶ್ರೀ ಕರಿ ತಿಮ್ಮಪ್ಪಸ್ವಾಮಿಯನ್ನು ಜನತೆ ಆರಾಧಿಸಿಕೊಂಡು ಬರುತ್ತಿದ್ದಾರೆ. ಋಷಿಮುನಿಗಳು ಈ ದೇವರನ್ನು ಪ್ರತಿಷ್ಠಾಪಿಸಿದ್ದಾರೆ ಎಂಬ ನಂಬುಗೆಯೂ ಇದೆ. ತಾಲೂಕಿನ ಕಣ್ವನದಿ ದಡದಲ್ಲಿ ಹಲವು ವಿಷ್ಣು ದೇವಾಲಯಗಳನ್ನು ಕಾಣಬಹುದಾಗಿದ್ದು, ಗ್ರಾಮದಲ್ಲಿರುವ ಕರಿತಿಮ್ಮಪ್ಪ ಇದರಲ್ಲಿ ಒಂದಾಗಿದೆ. ಪದ್ಮಾವತಿ ಸಮೇತರಾಗಿ ಸ್ವಾಮಿ ನೆಲೆಸಿದ್ದು, ಪಾದದ ಕೆಳಗೆ ಗರುಡ ದೇವರು ಇದೆ. ಪ್ರತಿವರ್ಷ ಪುಷ್ಪಾ ಬೃಂದಾವನೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ದೇವಾಲಯದ ಅರ್ಚಕರಾದ ದಯಾನಿಧಿ ಜನಾರ್ದನ್.

ಊರ ಕೆಳಗೆ ತೊರೆ.., ಮೇಲೆ ಕೆರೆ!

ಚನ್ನಪಟ್ಟಣ ನಗರಕ್ಕೆ ಅಂಟಿಕೊಂಡಿರುವ ಈ ತಿಟ್ಟಮಾರನಹಳ್ಳಿ ಸಂಪದ್ಭರಿತ ಗ್ರಾಮ ಎನ್ನಬಹುದು. ಗ್ರಾಮದ ಮುಂಭಾಗ ರಾಮಮ್ಮನ ಕೆರೆಯಿದ್ದು, ಗ್ರಾಮದ ಕೊನೆಯಲ್ಲಿ ಕಣ್ಣನದಿ (ತೊರೆ) ಹರಿದುಹೋಗುತ್ತದೆ. ಬಹುತೇಕ ಕೆರೆಗಳನ್ನು ಆಯಾ ಗ್ರಾಮದ ಹೆಸರಿನಿಂದ ಕರೆಯಲಾಗುತ್ತದೆ. ಆದರೆ, ಈ ಗ್ರಾಮದ ಕೆರೆಯನ್ನು ರಾಮಮ್ಮನ ಕೆರೆ ಎನ್ನಲಾಗುತ್ತದೆ.

ಇದರ ಹಿಂದೆಯೂ ರೋಚಕ ಇತಿಹಾಸವಿದೆ ಎನ್ನಲಾಗುತ್ತದೆ. ಕೃಷಿ ಹಾಗೂ ಹೈನುಗಾರಿಕೆ ಇಲ್ಲಿನ ಜನರ ಪ್ರಮುಖ ಕಸುಬಾಗಿದ್ದು, ಗ್ರಾಮದ ಹಲವು ಮಂದಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ಗ್ರಾಮ ನಗರಕ್ಕೆ ಹೊಂದಿಕೊಂಡಿದ್ದರೂ ಇಂದಿಗೂ, ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ತಾಲೂಕಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೆಮ್ಮೆಪಡುತ್ತಾರೆ ಗ್ರಾಮದ ನಿವೃತ್ತ ಪ್ರಾಂಶುಪಾಲ ನಿಂಗೇಗೌಡ (ಎನ್‌ಜಿ) ವೈದ್ಯರಾದ ಡಾ.ಟಿ.ವಿ.ಶಂಕರ್ ಹಾಗೂ ಡಾ.ಲತಾಮಣಿ, ಪ್ರಾಧ್ಯಾಪಕಿ ಡಾ. ಉಷಾಮಾಲಿನಿ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ ಟಿ.ಕೆ. ನವ್ಯಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net