ರಾಜಕೀಯ ಪಕ್ಷಗಳಿಗೆ ರಾಜ್ಯದ ಹಿತ ಬೇಕಿಲ್ಲ

000
Published on

ಜನಸಾಮಾನ್ಯರ ಪಕ್ಷದ ಅಗತ್ಯವಿದೆ ಎಂದ ಕೋಡಿಹಳ್ಳಿ ಚಂದ್ರಶೇಖರ್ ಚಿಕ್ಕಬಳ್ಳಾಪುರದಲ್ಲಿ ಜನತಾ ಪ್ರಣಾಳಿಕೆಯ ಚರ್ಚೆ

ಚಿಕ್ಕಬಳ್ಳಾಪುರ: ರಾಜಕೀಯ ಪಕ್ಷಗಳು ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಬದ್ಧತೆ ತೋರುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಜನಸಾಮಾನ್ಯರ ಪಕ್ಷದ ಅಗತ್ಯವಿದೆ ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಪಾದಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನವ ಕರ್ನಾಟಕ ಜನಾಂದೋಲನ ಹಾಗೂ ಜನರ ನಡುವೆ ಜನತಾ ಪ್ರಣಾಳಿಕೆಯ ಚರ್ಚೆಯ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರ ಬಜೆಟ್‌ನಲ್ಲಿ ಉತ್ತರ ಭಾರತಕ್ಕೆ ಆದ್ಯತೆ ಸಿಕ್ಕಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಿದೆ. ಪ್ರತಿಬಾರಿಯೂ ಇದೇ ಧೋರಣೆ ಮುಂದುವರಿಯುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಲು ಪ್ರಬಲ ಸಂಘಟನೆ, ಹೋರಾಟದ ಅಗತ್ಯವಿದೆ ಎಂದರು.

ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಹಣ ಸಿಗುತ್ತಿದೆ. ಆದರೆ, ಇಲ್ಲಿಗೆ ಮಾತ್ರ ನ್ಯಾಯಯುತವಾಗಿ ಪಾಲು ಹಂಚಿಕೆಯಾಗುತ್ತಿಲ್ಲ. ಚುನಾವಣೆ ಲೆಕ್ಕಾಚಾರ, ರಾಜಕೀಯ ಸ್ವಹಿತ ಲಾಭದಲ್ಲಿ ಕೆಲ ರಾಜ್ಯಗಳಿಗೆ ಮಾತ್ರ ಮಣೆ ಹಾಕಿ, ತಾರತಮ್ಯ ನೀತಿ ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ನಾಯಕರು ಕಾಂಗ್ರೆಸ್, ಬಿಜೆಪಿ ವರಿಷ್ಠರ ಧೋರಣೆಯನ್ನು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಜನರಿಗೆ ಅಗತ್ಯವಿರುವ ಅನುದಾನ ಮಂಜೂರು, ಯೋಜನೆಗಳ ಘೋಷಣೆ ಮಾಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ಜೆಡಿಎಸ್ ಹೊಂದಾಣಿಕೆ ರಾಜಕಾರಣದಲ್ಲಿ ಸಾಗುತ್ತಿದೆ ಎಂದು ಟೀಕಿಸಿದರು.

ನವದೆಹಲಿಯಲ್ಲಿ ರೈತರು ಮಾರಕ ಕೃಷಿ, ಕಾರ್ಮಿಕ, ಎಪಿಎಂಸಿ ಕಾಯ್ದೆಗಳನ್ನು ರದ್ದುಪಡಿಸಲು ಒತ್ತಾಯಿಸಿ ಸುದೀರ್ಘ ಹೋರಾಟ ನಡೆಸಿದರು. ಇದಕ್ಕೆ ಕಾಂಗ್ರೆಸ್ ಸಹ ಧ್ವನಿಗೂಡಿಸಿತ್ತು. ಆದರೆ, ರಾಜ್ಯದಲ್ಲಿ ಮಾರಕ ಕಾಯ್ದೆಗಳ ಅಂಶಗಳನ್ನು ಪರಿಗಣಿಸಿ, ನೀತಿ ರೂಪಿಸಲು ಸರ್ಕಾರವು ಆದೇಶಿಸಿದೆ. ಇದರಿಂದಲೇ ಪಕ್ಷಗಳ ಧೋರಣೆ ಏನೆಂಬುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಸಭೆಯಲ್ಲಿ ಮಾಜಿ ಶಾಸಕ ಬಸವರಾಜ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷ ರಾಮನಾಥ್, ಮುಖಂಡರಾದ ಪುಟ್ಟರಾಜು, ಶಿವರಾಮ್, ಎನ್.ರಮೇಶ್, ದಸ್ತಗಿರ್ ಮುಲ್ಲಾ, ರಾಧಾಕೃಷ್ಣ, ಅರುಣ್‌ಗೌಡ, ಚನ್ನಕೃಷ್ಣಪ್ಪ ಮತ್ತಿತರರು ಇದ್ದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ

ರೈತ, ದಲಿತ, ಮಹಿಳಾ, ಕಾರ್ಮಿಕ ಸೇರಿ ವಿವಿಧ ಸಂಘಟನೆಗಳು ನವ ಕರ್ನಾಟಕ ನಿರ್ಮಾಣ ಆಂದೋಲನವನ್ನು ಕೈಗೊಳ್ಳಲಾಯಿತು. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಎಂ.ಜಿ. ರಸ್ತೆ, ಬಿ.ಬಿ. ರಸ್ತೆಯಲ್ಲಿ ಘೋಷಣೆಗಳೊಂದಿಗೆ ಸಾಗಲಾಯಿತು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜನತಾ ಪ್ರಣಾಳಿಕೆಯ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಲಾಯಿತು.

ಚರ್ಚಿತ ವಿಷಯಗಳು

ರಾಜ್ಯದ ಗಂಭೀರ ಸಮಸ್ಯೆಗಳು, ನಿರೀಕ್ಷೆಯ ಯೋಜನೆಗಳ ಜತೆಗೆ ಜಿಲ್ಲೆಯ ಜನರ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು. ಮಹತ್ವದ ನೀರಾವರಿ ಯೋಜನೆಗಳು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಕೃಷಿ ನಿರ್ವಹಣೆಗೆ ಸಾಲ ಸೌಲಭ್ಯ, ಸಬ್ಸಿಡಿ, ಎಪಿಎಂಸಿಗಳ ಬಲವರ್ಧನೆ, ಕಾರ್ಮಿಕ ನೀತಿ, ಮಹಿಳಾ ಸಬಲೀಕರಣ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಹೈಕಮಾಂಡ್ ಸಂಸ್ಕೃತಿಗೆ ಕಡಿವಾಣ

ರಾಜಕೀಯ ಪಕ್ಷಗಳಲ್ಲಿನ ಹೈಕಮಾಂಡ್ ಸಂಸ್ಕೃತಿ ಕಿತ್ತೆಸೆಯುವುದು, ಪ್ರಾದೇಶಿಕ ಆಡಳಿತದ ಮೂಲಕ ರಾಜ್ಯದ ಹಿತವನ್ನು ಕಾಪಾಡುವುದೇ ನವ ಕರ್ನಾಟಕದ ಮುಖ್ಯ ಗುರಿ ಎಂದು ರಾಜ್ಯ ಬಿಎಸ್‌ಪಿ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು. 1956ರಿಂದ ಇದುವರೆಗೂ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಸಂಸ್ಕೃತಿಗೆ ಜೋತುಬಿದ್ದು ಈ ದೇಶದ ಬಹುಸಂಖ್ಯಾತರ ಬದುಕನ್ನು ಬೀದಿಗೆ ತಂದು ನಿಲ್ಲಿಸಿವೆ ಎಂದು ಕಿಡಿಕಾರಿದರು.

ಸಮಿತಿ ಸಂಚಾಲಕ ಮೋಹನ್‌ರಾಜ್ ಮಾತನಾಡಿ ಜಾತಿ, ಧರ್ಮ, ಮದ್ಯ, ಹಣಕ್ಕೆ ದಾಸರಾಗಿ ಮತ ನೀಡುವುದಿಲ್ಲ, ಒಂದೇ ಪಕ್ಷ, ಒಂದೇ ಚಿಹ್ನೆಯನ್ನು ಬೆಂಬಲಿಸುವ ವಾಗ್ದಾನವನ್ನು ಜನರು ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net