

ಮದ್ದೂರು: ವಿಶ್ವ ಪೋಲಿಯೋ ದಿನದ ಅಂಗವಾಗಿ ಮದ್ದೂರು ರೋಟರಿ ಸಂಸ್ಥೆ ವತಿಯಿಂದ ಮಂಗಳವಾರ ಜಾಗೃತಿ ಜಾಥಾ ನಡೆಯಿತು.
ಪಟ್ಟಣದ ಟಿ.ಬಿ. ವೃತ್ತದಿಂದ ಪೇಟೆ ಬೀದಿಯ ಮುಖಾಂತರ ಸಾಗಿದ ಜಾಥಾ ಶ್ರೀ ನರಸಿಂಹಸ್ವಾಮಿ ದೇವಸ್ಥಾನದವರೆಗೂ ತಲುಪಿ ಸಾರ್ವಜನಿಕರಲ್ಲಿ ಪೋಲಿಯೋ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಸಿ.ಶಶಿಗೌಡ ಮಾತನಾಡಿ, ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಪಾತ್ರ ಬಹಳ ದೊಡ್ಡದಾಗಿದೆ. 80ರ ದಶಕದಲ್ಲಿ ಜಗತ್ತಿನಾದ್ಯಂತ ಜಾಗತಿಕ ಪಿಡುಗಾಗಿದ್ದ ಪೋಲಿಯೋ ನಿರ್ಮೂಲನೆ ಮಾಡಲು ರೋಟರಿ ಸಂಸ್ಥೆ 1985ರಲ್ಲಿ ಪಣ ತೊಟ್ಟಿತು. ಜಗತ್ತಿನಾದ್ಯಂತ ಸರ್ಕಾರಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಜತೆಯಲ್ಲಿ ಕೈಜೋಡಿಸಿ ಪೋಲಿಯೋ ನಿರ್ಮೂಲನೆ ಮಾಡಲು ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡು ಅದರಲ್ಲಿ ಯಶಸ್ವಿಯಾಗಿದೆ ಎಂದರು.
ಇದೀಗ ಪ್ರಪಂಚದಾದ್ಯಂತ ಪೋಲಿಯೋ ಶೇ.99ರಷ್ಟು ನಿರ್ಮೂಲನೆಯಾಗಿದೆ. ಭಾರತ ದೇಶವು ಕೂಡ 2014ರ ಮಾರ್ಚ್ 27 ರಂದು ಪೋಲಿಯೋಮುಕ್ತ ದೇಶ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಣ ನೀಡಿದೆ ಎಂದು ತಿಳಿಸಿದರು.
ವರ್ಧಮಾನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ ಭಾಗವಹಿಸಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ಚನ್ನಂಕೇಗೌಡ ಗೌಡ ಹಾಗೂ ಡಾ.ದರ್ಶನ್ ಗೌಡ, ಮಾಜಿ ಅಧ್ಯಕ್ಷರಾದ ಬಿ.ಡಿ.ಹೊನ್ನೇಗೌಡ, ತಿಪ್ಪೂರು ರಾಜೇಶ್, ಬಸವರಾಜು, ಶಿವಪ್ಪ, ಕುಮಾರ್, ಪ್ರಕಾಶ್, ಮಲ್ಲರಾಜು, ಶಶಿಧರ ಕೆ.ಬಿ., ಮಂಜುನಾಥ ನಾಯ್ಡು, ಲೋಕೇಶ್, ಕಾಲೇಜಿನ ಪ್ರಾಂಶುಪಾಲೆ ನವ್ಯಾ ಅವಿನಾಶ್ ಇದ್ದರು.