

ಕೊರಟಗೆರೆ: ಕಳೆದ ಒಂದುವರೆ ತಿಂಗಳಲ್ಲಿ ರಾಜ್ಯದಲ್ಲಿ 200 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ. ಡ್ರಗ್ಸ್ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಪೋಲೀಸ್ ಇಲಾಖೆ ಕಾರ್ಯಾಚರಣೆಗಿಳಿದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಪಟ್ಟಣದ ಕನ್ನಿಕಾ ಮಹಲ್ನಲ್ಲಿ ವಾಸವಿ ಯುವಜನ ಸಂಘ, ಬೆಂಗಳೂರಿನ ಸಪ್ತಗಿರಿ, ಪ್ರಕ್ರಿಯ, ಸ್ಪರ್ಶ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಲ್ಟಿ ಸ್ಪೆಷಲ್ ಮೆಡಿಕಲ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದ ಅವರು, ಯುವಕಯರು ಡ್ರಗ್ ಮಾಫಿಯಾಗೆ ಹೆಚ್ಚು ಬಲಿಯಾಗುತ್ತಿದ್ದು ಅವರ ನರಗಳ ಮೇಲೆ ಪರಿಣಾಮ ಬೀರುವುದರಿಂದ ಬೇಗ ದುರ್ಬಲರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಕರ್ನಾಟಕ ಅತ್ಯಂತ ಹೆಚ್ಚಿನ ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ ಆಡಳಿತ ಮಾಡಿದ ಸರ್ಕಾರಗಳು ದೂರದೃಷ್ಟಿ ಇಟ್ಟುಕೊಂಡು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೂ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುತ್ತಿದೆ. 6500 ಪ್ರಾಥಮಿಕ ಆರೋಗ್ಯಗಳು ಕಾರ್ಯನಿರ್ವಹಿಸುತ್ತಿರುವುದು ದಾಖಲೆ ಎಂದರು.
ಆರೋಗ್ಯ ಇಲಾಖೆಯಂತೆಯೇ ಪೊಲೀಸ್ ಇಲಾಖೆ ಕೂಡ ಶಕ್ತಿಯುತವಾಗಿ ಬೆಳೆಸಲಾಗುತ್ತಿದೆ. ವಿದ್ಯಾವಂತ ಮತ್ತು ಸದೃಡ ಯುವಕರು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಲ್ಲಿ ತಹಸೀಲ್ದಾರ್‌ಮುನಿಶಾಮಿರೆಡ್ಡಿ, ಟಿಎಚ್‌ಒ ಡಾ.ವಿಜಯಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ತಾಲೂಕು ಅಧ್ಯಕ್ಷ ಕೋಡ್ಲಹಳ್ಳಿ ಅಶ್ವಥನಾರಾಯಣ, ವಾಸವಿ ಯುವಜನ ಸಂಘದ ಅಧ್ಯಕ್ಷ ದಿನೇಶ್, ಪದಾಧಿಕಾರಿಗಳಾದ ಸಾಗರ್, ಎಂ.ಜಿ ಬದ್ರಿಪ್ರಸಾದ್, ಡಾ.ಹರೀಶ್, ಡಾ.ವಿನಯ್, ಶಿವಶಂಕರ್, ಪ್ರಸಾದ್, ದರ್ಶನ್, ಕನ್ನಿಕಾ ವಿದ್ಯಾಪೀಠದ ಅಧ್ಯಕ್ಷ ಎಂ.ಜಿ ಸುಧೀರ್, ಕಾರ್ಯದರ್ಶಿ ಕೆ.ಎಸ್.ವಿ.ರಘು ಮತ್ತಿತರರು ಇದ್ದರು.