ಪೊಲೀಸರ ಬಲೆಗೆ ಇರಾನಿ ಗ್ಯಾಂಗ್

03 12 2024_CBP_PAGE_2_WEB final
Published on

ನಾಲ್ವರ ಬಂಧನ, 140 ಗ್ರಾಂ. ಚಿನ್ನಾಭರಣ ವಶ ಒಂಟಿ ಮಹಿಳೆ, ಒಂಟಿ ಮನೆಗಳೇ ಟಾರ್ಗೆಟ್

ಗೌರಿಬಿದನೂರು: ತಾಲೂಕಿನ ಜನರ ನಿದ್ದೆಗೆಡಿಸಿದ್ದ ಕಳ್ಳತನ ಪ್ರಕರಣ ಪತ್ತೆಹಚ್ಚುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದು, ನಾಲ್ವರನ್ನು ಬಂಧಿಸಿ ಮಾಲು ವಶಪಡಿಸಿಕೊಂಡಿದ್ದಾರೆ.

ಜೂ.26 ,ಅ.11, ನ.9, ನ.16ರಂದು ನಗರದ ವಿವಿಧ ಸ್ಥಳಗಳಲ್ಲಿ ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ನಗರ ಠಾಣೆಯಲ್ಲಿ ಮನೆಗಳವು ಹಾಗೂ ಸರಗಳವು ಪ್ರಕರಣಗಳು ದಾಖಲಾಗಿದ್ದವು.

ಇರಾನಿ ಗ್ಯಾಂಗ್ ಕೃತ್ಯ: ನಗರದ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಮುಖಚಹರೆ ಆಧಾರದ ಮೇರೆಗೆ ಇದು ಇರಾನಿ ಗ್ಯಾಂಗ್ ಕೃತ್ಯ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗಿತ್ತು. ಮನೆ ಕಳ್ಳತನದ ಖಚಿತ ಮಾಹಿತಿ ಮೇರೆಗೆ ಹಿರೇಬಿದನೂರು ಗ್ರಾಮದ ನಿವಾಸಿ ಮೆಹಬೂಬ್ ಪಾಷಾ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಎಲ್ಲ ಮಾಹಿತಿ ಬಹಿರಂಗಗೊಂಡಿದೆ.

ಆತ ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಶಿರೋಳ್ ತಾಲೂಕಿನ ಅಬ್ಬಾಸ್ ಮುನೀರ್ ಇರಾನಿ, ಅಬ್ಬಾಸ್ ಜಾಜ್ ಇರಾನಿ, ಜಾವೀದ್ ಜಹಾಂಗೀರ್ ಇರಾನಿ ಎಂಬ ಮೂವರನ್ನು ಬಂಧಿಸಿ, 143 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳ ಪತ್ತೆಗೆ ವೃತ್ತ ನಿರೀಕ್ಷಕ ಕೆ.ಪಿ. ಸತ್ಯನಾರಾಯಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಿಎಸ್‌ಐಗಳಾದ ರಮೇಶ್ ಗುಗ್ಗರಿ, ಟಿ.ಎನ್. ಮೂರ್ತಿ, ಚಂದ್ರಕಲಾ, ಸಿಬ್ಬಂದಿ ರಿಜ್ವಾನ್, ಶ್ರೀನಿವಾಸ ರೆಡ್ಡಿ, ಗೋಪಾಲ್, ಅಶ್ವತ್ಥ್, ರಾಜಶೇಖರ್, ಶ್ರೀರಾಮಯ್ಯ, ನವೀನ್ ಕುಮಾರ್ ಇತರರಿದ್ದರು. ತಂಡದ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳ್ಳತನವೇ ಕಾಯಕ

ಒಂಟಿ ಮಹಿಳೆಯರ ಮೇಲೆ ದಾಳಿ ಮಾಡಿ ಸರ ಕದಿಯುವುದು, ಒಂಟಿ ಮನೆಗಳನ್ನು ಹುಡುಕಿ ಬೀಗ ಒಡೆದು ಚಿನ್ನಾಭರಣ ಲೂಟಿ ಮಾಡುವುದನ್ನೇ ಆರೋಪಿಗಳು ಕಾಯಕ ಮಾಡಿಕೊಂಡಿದ್ದರು. ಜೂ.27ರಂದು ನಗರದ ಮಾದನಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದರು. ಅ.11ರಂದು ಕರೇಕಲ್ಲಹಳ್ಳಿಯಲ್ಲಿ ಅಂಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಮಹಿಳೆಯ ಸರ ಅಪಹರಿಸಿದ್ದರು. ನ.9ರಂದು ವಿನಾಯಕ ನಗರದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಒಂಟಿ ಮಹಿಳೆಯ ಸರ ದೋಚಿದ್ದರು. ನ.11ರಂದು ಸುಮಂಗಲಿ ಬಡಾವಣೆಯಲ್ಲಿ ಯಾರು ಇಲ್ಲದ ಮನೆಯನ್ನು ಗುರುತಿಸಿ ಹಿಂಬಾಗಿಲು ಒಡೆದು ಚಿನ್ನಾಭರಣ ಲೂಟಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net