

ಕಾರವಾರ: ಮೂರು ದಿನಗಳಿಂದ ನಡೆದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕ್ರೀಡಾಕೂಟದಲ್ಲಿ ಕಾರವಾರದ ಸಶಸ್ತ್ರ ಮೀಸಲು ಪಡೆಯ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕಾರವಾರ, ಶಿರಸಿ, ದಾಂಡೇಲಿ ಹಾಗೂ ಭಟ್ಕಳ ಉಪವಿಭಾಗದ ತಂಡಗಳು, ಸಶಸ್ತ್ರ ಮೀಸಲು ಪಡೆ ಹಾಗೂ ಮಹಿಳಾ ಪೊಲೀಸ್ ತಂಡಗಳು ಪಾಲ್ಗೊಂಡಿದ್ದವು. ವಿವಿಧ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಡಿಎಆರ್ ತಂಡ ಸಮಗ್ರ ವೀರಾಗ್ರಣಿ ತನ್ನದಾಗಿಸಿಕೊಂಡಿತು. ಅದೇ ತಂಡದ ನಾಗರಾಜ ಹನಗಂಡಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದರು.
ಇದನ್ನೂ ಓದಿ: ಚಿರತೆಗಳ ಸಂಚಾರ ನಾಯಿಗಳ ಪ್ರಾಣಕ್ಕೆ ಸಂಚಕಾರ-ಸಂಗಾತಿ ಹುಡುಕಲು ಓಡಾಡುವ ಬಿಗ್ ಕ್ಯಾಟ್‌ಗಳು
ಬಹುಮಾನ ವಿತರಿಸಿ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಡಾ.ಚಂದ್ರ ಗುಪ್ತ ಕೆಲಸದ ಒತ್ತಡದಲ್ಲೇ ಕಳೆಯುವ ಪೊಲೀಸ್ ವರ್ಗಕ್ಕೆ ಕ್ರೀಡಾಕೂಟದಿಂದ ವಿರಾಮ ದೊರೆತು, ಕಾರ್ಯಕ್ಷಮತೆ ಹೆಚ್ಚಲಿದೆ. ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದರು. ಎಸ್‌ಪಿ ಎನ್.ವಿಷ್ಣುವರ್ಧನ, ಎಎಸ್‌ಪಿ ಸಿ.ಟಿ.ಜಯಕುಮಾರ್ ಇದ್ದರು. ಕೊನೆಯಲ್ಲಿ ಆಯೋಜಿಸಿದ್ದ ಹಗ್ಗ ಜಗ್ಗಾಟ ಸ್ಪರ್ಧೆ ರೋಚಕವಾಗಿತ್ತು.