ಚಿರತೆಗಳ ಸಂಚಾರ ನಾಯಿಗಳ ಪ್ರಾಣಕ್ಕೆ ಸಂಚಕಾರ-ಸಂಗಾತಿ ಹುಡುಕಲು ಓಡಾಡುವ ಬಿಗ್‌ ಕ್ಯಾಟ್‌ಗಳು

leopard-at-bone
Published on

ಕಾರವಾರ: ಕಳೆದ 15 ದಿನಗಳಲ್ಲಿ ಜಿಲ್ಲೆಯ ಐದಕ್ಕೂ ಹೆಚ್ಚು ಚಿರತೆಗಳ ಓಡಾಟ ಕಂಡುಬAದಿದೆ. ಚಿರತೆಗಳು ರಾತ್ರಿ ಓಡಾಡುವ ವಿಡಿಯೋಗಳು ವೈರಲ್ ಆಗುತ್ತಿವೆ. ಇದರಿಂದ ಸಾಮಾನ್ಯ ಜನರಲ್ಲಿ ಭಯ ಹುಟ್ಟಿರುವುದಂತೂ ಸಹಜ. ಹಾಗಾದರೆ, ಚಿರತೆಗಳ ಸಂಖ್ಯೆ ಹೆಚ್ಚಿತಾ..? ಎಂಬ ಪ್ರಶ್ನೆ ಮೂಡುತ್ತದೆ.
ಹಾಗೇನಿಲ್ಲ. ಆದರೆ, ಚಿರತೆಗಳು ಕಾಡಂಚಿನಲ್ಲಿ ಮಾತ್ರವಲ್ಲ, ನಾಡಿನ ಕೆಲವೆಡೆ ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿವೆಯಷ್ಟೇ ಎನ್ನುತ್ತಾರೆ ವನ್ಯಜೀವಿ ತಜ್ಞರು. ಪಶ್ಚಿಮ ಘಟ್ಟ ಚಿರತೆಗಳ ಆವಾಸ ಸ್ಥಾನ. ಇಲ್ಲಿ ಕಂದು ಮೈ ಮೇಲೆ ಕಪ್ಪು ಚುಕ್ಕೆ ಇರುವ ಚಿರತೆಗಳ ಜತೆಗೆ ಅಪರೂಪದ ಕಪ್ಪ ಚಿರತೆಗಳೂ ಇವೆ. 2022 ರಲ್ಲಿ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಹುಲಿ ಗಣತಿಗಾಗಿ ಇಡಲಾಗಿದ್ದ ಕ್ಯಾಮರಾಗಳಲ್ಲಿ 200 ಕ್ಕೂ ಅಧಿಕ ಚಿರತೆಗಳು ಕಂಡುಬಂದಿವೆ. ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಇವುಗಳ ಸಂಖ್ಯೆ ನಿರ್ದಿಷ್ಟವಾಗಿ ಇರದಿದ್ದರೂ 300 ರಿಂದ 500 ಇರಬಹುದು ಎಂದು ಅಂದಾಜಿಸಲಾಗಿದೆ.
ಸಂಗಾತಿ ಹುಡುಕಾಟ:
ಚಿರತೆಗಳಿಗೆ ಇಂಥದ್ದೇ ನಿರ್ದಿಷ್ಟ ಸಂತಾನೋತ್ಪತ್ತಿಯ ಸಮಯ ಎಂದಿಲ್ಲ. ಆದರೆ, ನವೆಂಬರ್‌ನಿಂದ ಜನವರಿ ಕೊನೆಯವರೆಗೆ ಚಿರತೆ ಹಾಗೂ ಆ ಪ್ರಭೇದಕ್ಕೆ ಸೇರಿದ ಪ್ರಾಣಿಗಳು ಸಂಗಾತಿಯನ್ನು ಹುಡುಕಿ ಓಡಾಡುವ ಪ್ರಮಾಣ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಲು ಅದೂ ಒಂದು ಕಾರಣವಿರಬಹುದು ಎನ್ನುತ್ತಾರೆ ವನ್ಯ ಜೀವಿ ತಜ್ಞ ಓಂಕಾರ ಪೈ.
ನಾಯಿಗಳಿಗೆ ಸಂಚಕಾರ:
ಮುಂಬೈನಂಥ ಮಹಾ ನಗರಗಳಲ್ಲೇ ಚಿರತೆಗಳು ಇದುವುದು ದಾಖಲಾಗಿದೆ. ಉತ್ತರ ಕನ್ನಡದಂಥ ಅತ್ಯಧಿಕ ಕಾಡು ಇರುವ ಪ್ರದೇಶದಲ್ಲಿ ಚಿರತೆಗಳಿರುವುದು ಸಹಜ. ಆದರೆ, ಇತ್ತೀಚೆಗೆ ಬೀದಿ ನಾಯಿಗಳು, ಹಂದಿಗಳ ಸಂಖ್ಯೆ ಪ್ರತಿ ಊರಿನಲ್ಲೂ ಹೆಚ್ಚಿದೆ. ಚಿರತೆಗಳಿಗೆ ಕಾಡಿನಲ್ಲಿ ಬೇಟೆಯಾಡುವುದಕ್ಕಿಂತ ಈ ನಾಯಿಗಳು ಸುಲಭವಾಗಿ ಆಹಾರವಾಗುತ್ತವೆ. ಇದರಿಂದ ನಾಡಿಗೆ ಬರುವುದು ಹೆಚ್ಚಿರಬಹುದು ಎನ್ನುತ್ತಾರೆ ವನ್ಯಜೀವಿ ತಜ್ಞ ಓಂಕಾರ ಪೈ.
ಕ್ಯಾಮರಾ ಟ್ರಾಪ್‌:
ಈ ಹಿಂದೆಯೂ ಜಿಲ್ಲೆಯ ವಿವಿಧೆಡೆ ಚಿರತೆಗಳ ದಾಳಿ ಜಾನುವಾರುಗಳು, ಸಾಕು ನಾಯಿಗಳ ಮೇಲೆ ನಿರಂತರವಾಗಿ ಆಗುತ್ತಿತ್ತು. ಆದರೆ, ಅವುಗಳ ಸುದ್ದಿ ಒಂದು ಊರಿಗೆ ಮಾತ್ರ ಸೀಮಿತವಾಗಿತ್ತು. ಇಂದು ಪ್ರತಿ ಮನೆಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಾಡಿನಲ್ಲಿ ಪ್ರಾಣಿಗಳ ಓಡಾಟಕ್ಕೆ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರಿಂದ ಕ್ಯಾಮರಾಗಳಲ್ಲಿ ಚಿರತೆಗಳ ಓಡಾಟ ಸೆರೆಯಾಗುತ್ತಿದೆ. ಮಾಧ್ಯಮ, ಸಾಮಾಜಿಕ ಜಾಲತಾಣಗಳ ಬಳಕೆ ವ್ಯಾಪಕವಾಗುತ್ತಿರುವುದರಿಂದ ಅವುಗಳ ಫೋಟೋ ವಿಡಿಯೋ ವ್ಯಾಪಕವಾಗಿ ಓಡಾಡುತ್ತಿದೆಯಷ್ಟೇ ಎಂಬ ಅಭಿಪ್ರಾಯ ಕೇಳಿ ಬಂದಿದೆ.

  • ಇದನ್ನೂ ಓದಿ: ವಿಜಯವಾಣಿ, ಟಿಎಸ್ಎಸ್ ಆಸ್ಪತ್ರೆಯಿಂದ ಆಯೋಜಿಸಿದ್ದ ಆರೋಗ್ಯವಂತ ಮಗು ಸ್ಪರ್ಧೆಗೆ ಉತ್ತಮ ಸ್ಪಂದನೆ‌
  • ಜಿಲ್ಲೆಯ ಇತ್ತೀಚಿನ ಚಿರತೆಯ ಓಡಾಟ
  • *ಕುಮಟಾದ ಹೆಗಡೆಯಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ
  • *ಕಾರವಾರ ಸದಾಶಿವಗಡದಲ್ಲಿ ಚಿರತೆ ಜೋಡಿಗಳ ಚೆಲ್ಲಾಟ
  • *ಶಿರಸಿಯ ಮಳಲಗಾಂವನ ಮನೆಯಂಗಳದಲ್ಲೇ ಜಿಂಕೆ ಬೇಟೆಯಾಡಿದ ಚಿರತೆ
  • *ಕಾರವಾರದ ದೇವಬಾಗದಲ್ಲಿ ಚಿರತೆಗಳ ಸಂಚಾರ ಜನರ ಆತಂಕ
  • *ಹೊನ್ನಾವರ ಸಾಲ್ಕೋಡ್, ಅರೆ ಅಂಗಡಿ ಭಾಗದಲ್ಲಿ ಚಿರತೆ ಸಂಚಾರ
  • *ಮಳಗಿ ಗೋಟಗೋಡಿಯಲ್ಲಿ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು
  • *ಶಿರಸಿ ಉಂಚಳ್ಳಿ ಬಿಕ್ನಳ್ಳಿಯಲ್ಲಿ ಬಾವಿಗೆ ಬಿದ್ದು ಚಿರತೆ ಸಾವು

ಚಿರತೆಗಳು ಪಶ್ಚಿಮ ಘಟ್ಟದ ಪ್ರಮುಖ ನಿವಾಸಿಗಳು. ನಮಗಿಂತ ಮುಂಚಿನಿಂದಲೇ ಅವು ಇಲ್ಲಿವೆ. ಜನವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಹಿಡಿಯಲು ಅವು ಮುಂದಾಗುವುದು ಸಾಮಾನ್ಯ. ಆದರೆ, ಇದುವರೆಗೂ ಅವುಗಳಿಂದ ಎಲ್ಲೂ ಮಾನವರ ಮೇಲೆ ದಾಳಿಯಾಗಿಲ್ಲ. ಎಲ್ಲೆಲ್ಲಿ ಚಿರತೆಯ ಓಡಾಟದ ಬಗ್ಗೆ ದೂರುಗಳು ಬಂದಿವೆಯೋ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಜನ ಭಯ ಪಡುವ ಅಗತ್ಯವಿಲ್ಲ. ಮನೆಗಳ ಸುತ್ತ ವಾತಾವರಣ ಸ್ವಚ್ಛ ಇಟ್ಟುಕೊಳ್ಳಲು ಗಮನ ಹರಿಸಬೇಕು.ಪ್ರಶಾಂತ ಕುಮಾರ ಕೆ.ಸಿ.ಡಿಎಫ್‌ಒ ಕಾರವಾರ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net